ಪುರಸಭೆಯಲ್ಲಿ ಅಧಿಕಾರಿಗಳದ್ದೇ ಆಡಳಿತ

4 sor purasabe soraba
ಸೊರಬ ಪುರಸಭೆ ಕಾರ್ಯಾಲಯ.
Published on

ಸೊರಬ: ಸೊರಬ ಪಟ್ಟಣ ಪಂಚಾಯಿತಿ ಆಡಳಿತಾವಧಿ ಮುಗಿಯಲು ಇನ್ನು 8 ತಿಂಗಳು ಮಾತ್ರ ಬಾಕಿಯಿದೆ. ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ದ್ವಿತೀಯಾರ್ಧದ ಆಡಳಿತ ಆರಂಭವಾಗಿದ್ದರೂ ಸೊರಬ ಪಪಂ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿಲ್ಲ.

ಪಟ್ಟಣ ಪಂಚಾಯಿತಿ 2021ರಲ್ಲಿ ಪುರಸಭೆಯಾಗಿ ಮೇಲ್ದರ್ಜೆಗೇರಿದ್ದು ಒಂದು ಅವಧಿಗೆ ಇಬ್ಬರು ಅಧ್ಯಕ್ಷರಾಗಿದ್ದು ಬಿಟ್ಟರೆ ಉಳಿದ ದಿನಗಳಲ್ಲಿ ಅಧ್ಯಕ್ಷರೇ ಇಲ್ಲ. ಜೂನ್ 2019ರಲ್ಲಿ ಪಪಂನ 12 ವಾರ್ಡ್‌ಗಳಿಗೆ ಚುನಾವಣೆ ನಡೆದಿದ್ದು ಬಳಿಕ 4 ತಿಂಗಳ ನಂತರ ಅಕ್ಟೋಬರ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿತ್ತು. ಆಗ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಬಿಸಿಎಂಎ ವರ್ಗಕ್ಕೆ ವೀಸಲಾತಿ ನಿಗದಿಪಡಿಸಲಾಗಿತ್ತು. ಆಗ ಅಧ್ಯಕ್ಷರಾಗಿ ಎಂ.ಡಿ.ಉಮೇಶ್, ಉಪಾಧ್ಯಕ್ಷರಾಗಿ ಮಧುರಾಯ್ ಜಿ. ಶೇಟ್ ಆಯ್ಕೆಯಾಗಿದ್ದರು. ನಂತರ ಕುಮಾರ್ ಬಂಗಾರಪ್ಪ ಅವರ ಮೇಲಿನ ವೈಮನಸ್ಸಿನಿಂದಾಗಿ ಅದೇ ಪಕ್ಷದ ಕೆಲವರು 11 ತಿಂಗಳಲ್ಲಿ ಉಮೇಶ್ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದರು. ಉಪಾಧ್ಯಕ್ಷರು ಪ್ರಭಾರ ಅಧಿಕಾರ ವಹಿಸಿಕೊಂಡಿದ್ದರು.

ರಾಜಕೀಯ ಮೇಲಾಟ:

ಮತ್ತೆ ಅಧ್ಯಕ್ಷ ಸ್ಥಾನ ಖಾಲಿಯಾಗಿ ರಾಜಕೀಯ ಮೇಲಾಟಗಳ ನಡುವೆ 4 ತಿಂಗಳು ಗತಿಸಿ ನಂತರ ವೀರೇಶ್ ಮೇಸಿ ಅಧ್ಯಕ್ಷರಾಗಿ 15 ತಿಂಗಳು ಅಧಿಕಾರ ನಡೆಸಿದರು. ನಂತರ ಮುಂದಿನ 30 ತಿಂಗಳಿಗೆ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಕಳೆದ ಆಗಸ್ಟ್‌ನಲ್ಲಿ ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಎಂದು ಘೋಷಣೆಯಾಗಿತ್ತು. ಆದರೆ ಯಾವುದೇ ಎಸ್ಸಿ ಮಹಿಳೆ ಇಲ್ಲದ ಕಾರಣ ಮರು ಪರಿಶೀಲನೆಗೆ ಹೋದ ಮೀಸಲಾತಿ ಇನ್ನು ಪ್ರಕಟವಾಗಿಲ್ಲ. ಉಪಾಧ್ಯಕ್ಷರ ಮೀಸಲಾತಿಗೆ ಅನುಗುಣವಾಗಿ ಸದಸ್ಯರು ಇದ್ದರೂ ಉಪಾಧ್ಯಕ್ಷ ಸ್ಥಾನಕ್ಕೆ ಇನ್ನೂ ಚುನಾವಣೆ ನಡೆದಿಲ್ಲ. ಪಟ್ಟಣ ಪಂಚಾಯಿತಿ ಅಧಿಕಾರ ಅವಧಿ 8 ತಿಂಗಳು ಮಾತ್ರ ಬಾಕಿ ಇದೆ. ಅಷ್ಟರಲ್ಲಿ ಹೊಸ ಮೀಸಲಾತಿ ಬರುತ್ತದೆಯೋ, 60 ತಿಂಗಳ ಅಧ್ಯಕ್ಷರ ಅವಧಿ ಕೇವಲ 26 ತಿಂಗಳ ಅಧಿಕಾರಕ್ಕೆ ಸೀಮಿತವಾಗಿ ಕೊನೆಗೊಳ್ಳುತ್ತದೆಯೋ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net