

ಪಿರಿಯಾಪಟ್ಟಣ: ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2022 -23 ನೇ ಸಾಲಿನಲ್ಲಿ 16.42 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪಿ.ಕೆ.ಕುಮಾರ್ ತಿಳಿಸಿದರು.
ಸಂಘದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಐದು ವರ್ಷಗಳಲ್ಲಿ ಸಂಘದ ಸದಸ್ಯರ ಸಂಖ್ಯೆ ಹೆಚ್ಚಳಗೊಂಡಿದೆ. ಐದು ವರ್ಷಗಳ ಹಿಂದೆ 847 ಷೇರುದಾರರನ್ನು ಹೊಂದಿದ್ದ ಸಂಘದಲ್ಲಿ ಪ್ರಸ್ತುತ 1187 ಷೇರುದಾರರಿದ್ದಾರೆ ಎಂದು ತಿಳಿಸಿದರು.
ಎರಡು ಕೋಟಿ ರೂ.ಗೂ ಹೆಚ್ಚು ನಿಗದಿತ ಠೇವಣಿಯನ್ನು ಹೊಂದಿರುವ ಸಂಘದಲ್ಲಿ ನಿಗದಿತ ಠೇವಣಿಗಳ ಮೇಲೆ ಶೇ.8.5 ದರದಲ್ಲಿ ಬಡ್ಡಿ ನೀಡಲಾಗುತ್ತಿದೆ. ಗ್ರಾಮೀಣ ಜನರು ಪಡಿತರ ಪಡೆಯಲು ಹೆಚ್ಚು ದೂರ ಹೋಗಬಾರದು ಎಂಬ ಉದ್ದೇಶದಿಂದ ತಾಲೂಕಿನ ಪಾರೆಕೊಪ್ಪಲು ಮತ್ತು ಲಕ್ಷ್ಮಿಪುರ ಗ್ರಾಮಗಳಲ್ಲಿ ಉಪ ಪಡಿತರ ವಿತರಣಾ ಕೇಂದ್ರ ತೆರೆಯಲಾಗಿದೆ ಎಂದು ತಿಳಿಸಿದರು.
ವಾರ್ಷಿಕವಾಗಿ 50 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಸುತ್ತಿರುವ ಸಂಘದಲ್ಲಿ 2,500 ರೂ.ಗೂ ಹೆಚ್ಚು ಷೇರುಧನ ಹೊಂದಿರುವವರಿಗೆ ಶೇ. 5% ಡಿವಿಡೆಂಟ್ ನೀಡಲಾಗುತ್ತಿದೆ ಎಂದರು.
ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ವಿ.ಆರ್.ವೆಂಕಟೇಶ್ ಮಾತನಾಡಿದರು. ಸಂಘದ ಉಪಾಧ್ಯಕ್ಷ ಕರಿನಾಯಕ, ನಿರ್ದೇಶಕರಾದ ಪ್ರಭುಕುಮಾರ್, ಎಚ್.ಬಿ.ರಮೇಶ್, ನಟರಾಜು, ಸೈಯದ ಸಿರಾಜ್, ಸಣ್ಣಪ್ಪ, ಬಿ.ಆರ್.ಸತೀಶ್ ಕುಮಾರ್, ಪಾರ್ವತಿ, ಗೀತಾ, ಮೇಲ್ವಿಚಾರಕ ಎಚ್.ಕೆ.ಜಗದೀಶ್, ಸಂಘದ ಕಾರ್ಯದರ್ಶಿ ಎಚ್.ಆರ್.ಪ್ರವೀಣ್, ಸಿಬ್ಬಂದಿ ಸಿ.ಎಂ.ಜ್ಯೋತಿ, ಕೆ.ಸಾಗರ್, ಎ.ಕುಮಾರಸ್ವಾಮಿ, ಕೆ.ನಾಗರಾಜು ಮನೋಹರ್ ಮತ್ತಿತರರು ಉಪಸ್ಥಿತರಿದ್ದರು.