ಪಿಯುಸಿ ವಿಜ್ಞಾನ ಪರೀಕ್ಷೆ ಕನ್ನಡದಲ್ಲಿ ಅವಕಾಶ

15ctd4-02
Published on


ಚಿತ್ರದುರ್ಗ: ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲೂ ವಿಜ್ಞಾನ ವಿಷಯದ ಪರೀಕ್ಷೆ ಕನ್ನಡದಲ್ಲಿ ಬರೆಯಬಹುದಾಗಿದ್ದು, ಹೆಚ್ಚು ಅಂಕ ಗಳಿಸಲು ಸಹಕಾರಿಯಾಗಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ರಾಜು ಹೇಳಿದರು.
ಇಲಾಖೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲೆಯ ಪಿಯು ವಿಜ್ಞಾನ ಕಾಲೇಜುಗಳ ಪ್ರಾಂಶುಪಾಲರ ಸಭೆಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಪಿಯು ವಿಜ್ಞಾನ ಪಠ್ಯಪುಸ್ತಕ ಕನ್ನಡದಲ್ಲಿ ಮುದ್ರಿಸಿ ಸರ್ಕಾರಿ ಕಾಲೇಜುಗಳಿಗೆ ಸರಬರಾಜು ಮಾಡಿದೆ ಎಂದರು.

ಜಿಲ್ಲೆಯಲ್ಲಿ ವಿಜ್ಞಾನ ವಿಷಯ ಬೋಧಿಸುವ ಸರ್ಕಾರಿ 22, ಅನುದಾನಿತ 13, ಅನುದಾನ ರಹಿತ 34 ಸೇರಿ 69 ಪಿಯು ಕಾಲೇಜುಗಳಿವೆ. ಕನ್ನಡದಲ್ಲಿ ಬೋಧಿಸುವ ಸಂಬಂಧ ಆಯ್ದ ಕಾಲೇಜುಗಳಲ್ಲಿ ಶೀಘ್ರ ವಿದ್ಯಾರ್ಥಿ, ಪಾಲಕರ ಸಭೆ ಕರೆಯಲಾಗುವುದು ಎಂದರು.

ಪ್ರತಿ ಸರ್ಕಾರಿ ಕಾಲೇಜುಗಳಿಗೆ 5 ಸೆಟ್ ಪುಸ್ತಕಗಳ ವಿತರಣೆ ಮಾಡಲಾಗಿದೆ. ಬಹುತೇಕ ಉಪನ್ಯಾಸಕರು ಈಗಲೂ ವಿಜ್ಞಾನದ ವಿಷಯವನ್ನು ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಮನನ ಮಾಡಿಕೊಟ್ಟು ನಂತರ ಇಂಗ್ಲೀಷ್‌ನಲ್ಲಿ ನೋಟ್ಸ್ ಕೊಡಲಿದ್ದಾರೆ ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಜೆ.ಯಾದವರೆಡ್ಡಿ ಮಾತನಾಡಿ, ಜಗತ್ತಿನ ಯಾವ ದೇಶದಲ್ಲಿಯೂ ಇಂಗ್ಲೀಷ್ ಬದುಕು ಕಟ್ಟಿಕೊಟ್ಟಿಲ್ಲ. ಜಪಾನ್, ಚೀನಾ, ಜರ್ಮನ್, ರಷ್ಯಾ ಸೇರಿ ವಿವಿಧೆಡೆ ಅಲ್ಲಿನ ಮಾತೃಭಾಷೆಯೇ ಜೀವನಕ್ಕೆ ಪ್ರಧಾನ ಭೂಮಿಕೆಯಾಗಿದೆ. ಹೀಗಾಗಿ ನಾವೇಕೆ ಕನ್ನಡದಲ್ಲಿ ಬದುಕು ಕಟ್ಟಿಕೊಳ್ಳುವ ಕೆಲಸ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.

ನಿವೃತ್ತ ಪ್ರಾಧ್ಯಾಪಕ ಡಾ.ಸಂಗೇನಹಳ್ಳಿ ಅಶೋಕ್‌ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಶ.ಮಂಜುನಾಥ್, ಪಪೂ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ನಾಗಣ್ಣ, ಕಾರ್ಯದರ್ಶಿ ದುರುಗಪ್ಪ ಇತರರಿದ್ದರು.

*ಕೋಟ್
ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಇಂಜಿನಿಯರಿಂಗ್ ಸಂಬಂಧ ಕನ್ನಡ ಪಠ್ಯ ಪುಸ್ತಕ ಮುದ್ರಿಸಿದೆ. ಪಿಯುಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಓದಿದವರು ಇಂಜಿನಿಯರಿಂಗ್‌ನಲ್ಲಿಯೂ ಮಾತೃಭಾಷೆಯಲ್ಲೇ ಮುಂದುವರಿಯಬಹುದು. ಸಿಇಟಿ, ನೀಟ್ ಕನ್ನಡದಲ್ಲಿ ಬರೆಯುವ ಅವಕಾಶ ಕಲ್ಪಿಸಲಾಗಿದೆ.
ಚಿಕ್ಕಪ್ಪನಹಳ್ಳಿ ಷಣ್ಮುಖ, ಪತ್ರಕರ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net