ಪಿಬಿಎಸ್‌ಎಸ್ ಸೈಕಲ್ ಸೇವೆಗೆ ಜನ ಫಿದಾ!

Published on

ಜಗದೀಶ ಹೊಂಬಳಿ ಬೆಳಗಾವಿ
ಕಡಿಮೆ ಖರ್ಚಿನಲ್ಲಿ ನಗರದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾರ್ವಜನಿಕರಿಗೆ ದಿನದ 24 ಗಂಟೆಯೂ ಸಂಚಾರ ಸೇವೆ ಕಲ್ಪಿಸುವುದಕ್ಕೆ ಬೆಳಗಾವಿ ಸ್ಮಾರ್ಟ್‌ಸಿಟಿಯಿಂದ ಆರಂಭವಾಗಿರುವ ಪಿಬಿಎಸ್‌ಎಸ್ (ಸಾರ್ವಜನಿಕರಿಗೆ ಬೈಸಿಕಲ್ ಹಂಚಿಕೆ ವ್ಯವಸ್ಥೆ) ಯೋಜನೆಗೆ ನಗರದ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
 2022ರ ಡಿಸೆಂಬರ್ 15ರಂದು ಯೋಜನೆ ಆರಂಭವಾಗಿದ್ದು, ಎರಡು ತಿಂಗಳ ಅವಧಿಯಲ್ಲಿ 6,315 ಜನರು ಯೋಜನೆ ಲಾಭ ಪಡೆಯುತ್ತಿದ್ದಾರೆ. ಯೋಜನೆಯಡಿ 2 ಬಗೆಯ ಸೈಕಲ್ ಹಾಗೂ 1 ಇಲೆಕ್ಟ್ರಿಕಲ್ ಸೈಕಲ್‌ಗಳನ್ನು ಸೇವೆಗೆ ಅಣಿಗೊಳಿಸಲಾಗಿದೆ. ಸ್ಮಾರ್ಟ್‌ಸಿಟಿಯಿಂದ ನಗರದಲ್ಲಿ ನಿರ್ಮಿಸಿರುವ ಸೈಕಲ್ ತಂಗುದಾಣಗಳಲ್ಲಿ ಮೂರೂ ವಿಧದ ಒಟ್ಟು 300 ಸೈಕಲ್‌ಗಳನ್ನು ಇಡಲಾಗಿದ್ದು, ನಾಗರಿಕರು ಇವುಗಳನ್ನು ಬಳಸಿ, ನಗರದಲ್ಲಿ ಸಂಚರಿಸುತ್ತಿದ್ದಾರೆ. ಬೆಳೆಯುತ್ತಿರುವ ಬೆಳಗಾವಿಯಲ್ಲಿ ಬಹುತೇಕರಿಗೆ ಆಟೋಸೇವೆ ದುಬಾರಿಯಾಗಬಹುದು, ಜತೆಗೆ ಬಡ ವಿದ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ಶಾಲೆ- ಕಾಲೇಜುಗಳಿಗೆ ಹೋಗುವುದಕ್ಕೆ ಈ ಯೋಜನೆ ಅನುಕೂಲವಾಗಿದೆ. ನಗರದ ಕೆಲವು ನಾಗರಿಕರು ಕಚೇರಿ ಕೆಲಸವಲ್ಲೇ ಬೆಳಗ್ಗೆ ಹಾಗೂ ಸಂಜೆ ವಾಯು ವಿಹಾರಕ್ಕೆಂದೂ ಈ ಸೈಕಲ್‌ಗಳನ್ನು ಬಳಸುತ್ತಿದ್ದಾರೆ. ಪರಿಸರದಲ್ಲಿ ಕಾರ್ಬನ್ ಪ್ರಮಾಣ ತಗ್ಗಿಸುವ ಈ ಪರಿಸರಸ್ನೇಹಿ ಯೋನೆಯು ಬೆಳೆಯುತ್ತಿರುವ ಬೆಳಗಾವಿ ನಗರದಲ್ಲಿ ವಿಶೇಷ ಮಹತ್ವ ಪಡೆದಿದೆ.


 ಎಲ್ಲಿಂದ ಎಲ್ಲೆಲ್ಲಿಗೆ ಪ್ರಯಾಣ?:
 ಉದ್ಯಮಬಾಗ ಬಸ್ ನಿಲ್ದಾಣ, ಚನ್ನಮ್ಮ ನಗರ ಬಸ್ ನಿಲ್ದಾಣ, ಟಿಳಕವಾಡಿ ವ್ಯಾಕ್ಸಿನ್ ಡಿಪೋ ಮೈದಾನ, ದೇಶಮುಖ್ ರಸ್ತೆ 1ನೇ ಗೇಟ್, ಆರ್‌ಪಿಡಿ ಕಾಲೇಜು, ಗೋವಾವೇಸ್ ವೃತ್ತ, ಡಿಜಿಟಲ್ ಲೈಬ್ರರಿ, ಗೋಗಟೆ ವೃತ್ತ (ಪಣಜಿ-ಬೆಳಗಾವಿ ರಸ್ತೆ), ಕಾಲೇಜು ರಸ್ತೆ (ಲಿಂಗರಾಜ ಕಾಲೇಜು), ರಾಣಿ ಚನ್ನಮ್ಮ ವೃತ್ತ (ಸರ್ದಾರ ಹೈಸ್ಕೂಲ್ ರಸ್ತೆ), ಕೋರ್ಟ್ ಕಾಂಪೌಂಡ್, ಆರ್‌ಟಿಒ ವೃತ್ತ, ಕೋಟೆಕೆರೆ ಲೇಕ್, ಮಹಾಂತೇಶ ನಗರ ಬಸ್‌ಸ್ಟಾೃಂಡ್, ಶ್ರೀನಗರ ಗಾರ್ಡನ್, ಕೊಲ್ಹಾಪುರ ವೃತ್ತ, ಕೆಪಿಟಿಸಿಎಲ್ ರಸ್ತೆ, ಕೆಎಲ್‌ಇ ಆಸ್ಪತ್ರೆ ಬಸ್ ನಿಲ್ದಾಣ, ಗಾಲ್ಫ್ ಕೋರ್ಸ್, ಹನುಮಾನ ನಗರ ವೃತ್ತ, ಹಿಂಡಲಗಾ ಗಣಪತಿ ದೇವಸ್ಥಾನ ಹಿಂದುಗಡೆ ಸೈಕಲ್ ನಿಲ್ದಾಣಗಳು ಇವೆ. ಈ ಎಲ್ಲ ಸೈಕಲ್ ನಿಲ್ದಾಣಗಳಿಂದ ಎಲ್ಲ ನಿಲ್ದಾಣಗಳಿಗೆ ಸಂಚರಿಸಬಹುದು. ಪ್ರತಿ ಅರ್ಧ ಗಂಟೆ 5 ರೂ. ಶುಲ್ಕವಿದೆ. ಇಲೆಕ್ಟ್ರಿಕ್ ಸೈಕಲ್‌ಗೆ 30 ರೂ. ಶುಲ್ಕವಿದೆ.


 ಬಳಸುವುದು ಹೇಗೆ?:
 ಗೂಗಲ್ ಪ್ಲೇ ಸ್ಟೋರ್‌ನಲ್ಲಿ ‘ಯಾನಾ’ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕು. ಆ್ಯಪ್ ಮೂಲಕ 500 ರೂ. ಮುಂಗಡ ಗಣ ಸಂದಾಯ ಮಾಡಬೇಕು. ಈ ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ಸೈಕಲ್ ಸ್ಟಾೃಂಡ್‌ನಲ್ಲಿರುವ ಸೈಕಲ್‌ಗಳ ಮೇಲೆ ಇರುವ ‘ಕ್ಯೂ ಆರ್ ಕೋಡ್’ ಸ್ಕಾೃನ್ ಮಾಡಿದರೆ ಓಟಿಪಿ ಬರುತ್ತದೆ. ಆ ಒಟಿಪಿ ಸಹಾಯದಿಂದ ಸೈಕಲ್ ರೈಡ್ ಮಾಡಬಹುದು. ದಿನದ 24 ಗಂಟೆಯೂ ಸೈಕಲ್ ಸೇವೆ ಲಭ್ಯವಿರುತ್ತದೆ. ಆದರೆ, ನಾಗರಿಕರು ಅಗತ್ಯ ರಿಚಾರ್ಜ್ ಮಾಡಿಟ್ಟುಕೊಂಡಿರಬೇಕು. ಸೈಕಲ್‌ಗಳ ಬಳಕೆ ಮಾಡಿಕೊಂಡ ಬಳಿಕ ಸೈಕಲ್ ಅನ್ನು ಸೈಕಲ್ ನಿಲ್ದಾಣದಲ್ಲಿ ನಿಲ್ಲಿಸುವಾಗಿ ಕ್ಯೂಆರ್ ಕೋಡ್ ಸ್ಕಾೃನ್ ಮಾಡುವ ಮೂಲಕ ನಿಲ್ದಾಣದಲ್ಲಿಟ್ಟು ಲಾಕ್ ಮಾಡಬೇಕು.


 ಅರ್ಧ ಗಂಟೆಗೊಂದು ರೈಡ್:
 ಅರ್ಧ ಗಂಟೆ ಸೈಕಲ್ ಬಳಕೆ ಮಾಡಿದರೆ ‘ಒಂದು ರೈಡ್’ ಎಂದು ಪರಿಗಣಿಸಲಾಗುತ್ತದೆ. ಎರಡು ತಿಂಗಳ ಅವಧಿಯಲ್ಲಿ 4,350 ರೈಡ್‌ಗಳು ಆಗಿವೆ. ಸೈಕಲ್‌ಗಳು ಒಟ್ಟಾರೆ 4,080 ಕಿ.ಮೀ. ಕ್ರಮಿಸಿವೆ. 6,315 ಜನ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಸೈಕಲ್‌ಗಳನ್ನು ಬಳಸುತ್ತಿದ್ದಾರೆ. ಪರಿಸರದಲ್ಲಿ ಬೆರೆಯುತಿದ್ದ 1020 ಕೆ.ಜಿ ಯಷ್ಟು ಕಾರ್ಬನ್ ಅನ್ನು ತಡೆಗಟ್ಟಿವೆ.
 
 ಸ್ಮಾರ್ಟ್‌ಸಿಟಿ ಅನುದಾನ
 ಕೊಪ್ಪಳ ಮೂಲದ ‘ಧರಣಿ ಎಂಟರ್‌ಪ್ರೈಸಸ್’ ಕಂಪನಿಗೆ ಬೆಳಗಾವಿ ಸ್ಮಾರ್ಟ್‌ಸಿಟಿ ಕಂಪನಿಯು ಈ ಸೇವೆಯನ್ನು ಹೊರಗುತ್ತಿಗೆ ನೀಡಿದೆ. ಸೈಕಲ್‌ಗಳನ್ನು ಈ ಕಂಪನಿಯೇ ನಿರ್ವಹಿಸುತ್ತಿದೆ. ಕಂಪನಿಯು ಸೈಕಲ್ ಖರೀದಿ ಸೇರಿ ಇತರೆ ಸೇವೆ ಅನುಷ್ಠಾನ ಮಾಡಿಕೊಂಡಿದ್ದು, ಸ್ಮಾರ್ಟ್‌ಸಿಟಿಯಿಂದ ಅನುದಾನ ಒದಗಿಸಲಾಗಿದೆ.

 ***
 ನಗರದಲ್ಲಿ ಪರಿಸರ ಸ್ನೇಹಿ ಸೈಕಲ್‌ಗಳನ್ನು ಬಳಸುವವರ ಸಂಖ್ಯೆ ಹೆಚ್ಚುತ್ತಿದೆ. ಧರಣಿ ಎಂಟರ್‌ಪ್ರೈಸಸ್‌ಗೆ ಈ ಯೋಜನೆ ನಿರ್ವಹಣೆ ಮಾಡುವುದಕ್ಕೆ ಹೊರಗುತ್ತಿಗೆ ಕೊಡಲಾಗಿದೆ. ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದು.
  ! ಪ್ರವೀಣ ಬಾಗೇವಾಡಿ, ಸ್ಮಾರ್ಟ್ ಸಿಟಿ ಎಂ.ಡಿ. ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net