

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಿಎಂಶ್ರೀ ಯೋಜನೆಯಡಿ 2023-24 ಹಾಗೂ 2024-25ನೇ ಸಾಲಿಗೆ 9.50 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ ಎಂದು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ ಮಂಗಳವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ.
ಸಂಸದ ಗೋವಿಂದ ಎಂ.ಕಾರಜೋಳ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ಶಾಲೆಗಳ ಮೂಲಸೌಲಭ್ಯಗಳ ಉನ್ನತೀಕರಣ, ವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆ, ಸ್ಮಾರ್ಟ್ ಶಾಲೆಗಳಾಗಿ ಪರಿವರ್ತಿಸಲು, ಗ್ರಂಥಾಲಯ, ಪೀಠೋಪಕರಣ, ಡಿಜಿಟಲ್ ಕಲಿಕಾ ಸಾಮಗ್ರಿಗಳ ಅಳವಡಿಕೆ, ಆಟದ ಮೈದಾನದ ಅಭಿವೃದ್ಧಿ, ಮೆಡಿಸಿನಲ್ ಗಾರ್ಡನ್‌ಗಳ ನಿರ್ಮಾಣ ಮಾಡಲಾಗುತ್ತದೆ ಎಂದಿದ್ದಾರೆ.
ಡಿಜಿಟಲ್ ಶಿಕ್ಷಣ, ನಾಯಕತ್ವ ಕೌಶಲ ಮತ್ತು ಏಕಭಾರತ ಶ್ರೇಷ್ಠ ಭಾರತ, ಹೆರಿಟೇಜ್ ನಡಿಗೆ, ಕಲಿಕಾಹಬ್ಬ, ಕಲೋತ್ಸವ, ಸಾಂಸ್ಕೃತಿಕ ನಿನಾದದಂಥ ಕಾರ‌್ಯಕ್ರಮ ಸಂಯೋಜಿಸುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪಿಎಂಶ್ರೀ ಯೋಜನೆ ಗಮನ ಹರಿಸುತ್ತದೆ ಎಂದು ಸಚಿವರು ಉತ್ತರಿಸಿದ್ದಾರೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿ ಭರಮಸಾಗರ, ಕೊಂಡ್ಲಹಳ್ಳಿ, ಕುರುಬರಹಳ್ಳಿ, ಕವಾಡಿಗರಹಟ್ಟಿ, ಚಳ್ಳಕೆರೆ, ಕಾಮಸಮುದ್ರ, ಹೊಳಲ್ಕೆರೆ, ಎಚ್‌ಡಿ ಪುರ, ಯಲ್ಲಾಭೋವಿಹಟ್ಟಿ, ಮೊಳಕಾಲ್ಮೂರು, ಕೋನಾಪುರ ಸರ್ಕಾರಿ ಶಾಲೆಗಳಿಗೆ ಅನುದಾನ ಬಿಡುಗಡೆಯಾಗಿದೆ ಎಂದು ಸಚಿವರು ಹೇಳಿದ್ದಾರೆಂದು ಸಂಸದರು ಹೇಳಿಕೆಯಲ್ಲಿ ತಿಳಿಸಿದ್ದಾರೆ.