ಪಿ.ಪಟ್ಟಣದಲ್ಲಿ ಬಿಜೆಪಿ ಪ್ರಾಬಲ್ಯ

30BTP01
Published on

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನಲ್ಲಿ ಈ ಬಾರಿ ಬಿಜೆಪಿ ಹೆಚ್ಚಿನ ಪ್ರಾಬಲ್ಯ ಹೊಂದಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ನಿಶ್ಚಿತ ಎಂದು ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಎಂ.ಎಂ.ರಾಜೇಗೌಡ ವಿಶ್ವಾಸ ವ್ಯಕ್ತಪಡಿಸಿದರು.


ಬೆಟ್ಟದಪುರ ಸಮೀಪದ ಹಾರನಹಳ್ಳಿ ಗ್ರಾಮದಲ್ಲಿ ತಾಲೂಕು ಬಿಜೆಪಿ ಘಟಕದಿಂದ ಮಂಗಳವಾರ ಸಂಜೆ ಆಯೋಜಿಸಿದ್ದ ಪಂಚಾಯಿತಿ ಮಟ್ಟದ ವಿಶೇಷ ಸಭೆಯಲ್ಲಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇಂತಹ ಸಂದರ್ಭದಲ್ಲಿ ತಾಲೂಕಿನಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಹೆಚ್ಚಿನ ಅನುದಾನ ತಂದು ಸಮಗ್ರ ಅಭಿವೃದ್ಧಿಗೆ ಶ್ರಮಿಸಬಹುದು. ಪಿರಿಯಾಪಟ್ಟಣದಲ್ಲಿ ಕಳೆದ ಎರಡೂ ಚುನಾವಣೆ ಸಂದರ್ಭದಲ್ಲಿ ಕೆಲವು ತೊಂದರೆಗಳಾಗಿವೆ. ಆದರೆ ಈಗ ಅವುಗಳಿಗೆ ಅವಕಾಶವಿಲ್ಲ. ಕ್ಷೇತ್ರಕ್ಕೆ ಶೀಘ್ರದಲ್ಲಿ ಅಭ್ಯರ್ಥಿಯನ್ನು ಘೋಷಣೆಯಾಗಲಿದೆ. ಪಕ್ಷವು ಜನರ ಹಿತ ಕಾಯುವ ಹಾಗೂ ಪಕ್ಷ ಸಂಘಟಿಸುವ ಅಭ್ಯರ್ಥಿಯನ್ನೇ ಆಯ್ಕೆ ಮಾಡಲಿದೆ ಎಂದರು.


ಈಗಾಗಲೇ ಪಕ್ಷವು ಮೈಸೂರು ಜಿಲ್ಲೆಯಲ್ಲಿ 2023ರ ಚುನಾವಣೆಯ ಸಮೀಕ್ಷೆಯನ್ನು ಮಾಡಿದೆ. ಆ ಸಮೀಕ್ಷೆ ಪ್ರಕಾರ ಪಿರಿಯಾಪಟ್ಟಣದಲ್ಲಿಯೂ ಹೆಚ್ಚಿನ ಪ್ರಾಬಲ್ಯ ಕಂಡು ಬಂದಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ತೊರೆದು ಹಲವಾರು ಮಂದಿ ಪಕ್ಷ ಸೇರ್ಪಡೆಗೊಳ್ಳುತ್ತಿದ್ದಾರೆ. ಸಂಸದ ಪ್ರತಾಪ್ ಸಿಂಹ ತಾಲೂಕಿನ ಅಭಿವೃದ್ಧಿಗೆ ಶ್ರಮ ವಹಿಸಿ ಸಹಕಾರ ನೀಡಿದ್ದಾರೆ ಎಂದರು.
ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಇಂದು ದೇಶಕ್ಕೆ ಮಾದರಿಯಾಗಿದ್ದಾರೆ. ಇಡೀ ಪ್ರಪಂಚವೇ ನಮ್ಮ ದೇಶದತ್ತ ನೋಡುವ ಹಾಗೇ ಮಾಡಿದ್ದಾರೆ. ದೇಶ ಕಟ್ಟುವಂತಹ ಹಾಗೂ ಮುನ್ನೆಡೆಸುವಂತಹ ಜವಾಬ್ದಾರಿ ಅವರ ಮೇಲೆ ಮಾತ್ರ ಇಲ್ಲ. ಪ್ರತಿಯೊಬ್ಬ ಪ್ರಜೆಯ ಮೇಲೂ ಇದೆ ಎಂದರು.


ವಿವಿಧೆಡೆ ಸಭೆ: ಬಿಜೆಪಿಯಿಂದ ಸಮೀಪದ ಗಂಗನಕುಪ್ಪೆ, ಕಣಗಾಲು, ಚಪ್ಪರದಹಳ್ಳಿ, ಗೊರಹಳ್ಳಿ, ದೊಡ್ಡಕಮರಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿಶೇಷ ಸಭೆಯ ನಡೆಯಿತು.
ಚಪ್ಪರದಹಳ್ಳಿ ಗ್ರಾಮದ ಯುವಕ ಚೇತನ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿದ ಮಾಜಿ ಸಂಸದ ಸಿ.ಎಚ್.ವಿಜಯಶಂಕರ್, ಚಿಕಿತ್ಸೆ ವೆಚ್ಚ ಹಾಗೂ ಕಿಡ್ನಿ ದೊರಕಿಸಿಕೊಡುವಂತೆ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರಿಗೆ ಮನವಿ ಮಾಡಲಾಗುವುದಾಗಿ ಭರವಸೆ ನೀಡಿದರು.

ತಂಬಾಕು ಮಂಡಳಿ ಉಪಾಧ್ಯಕ್ಷ ಎಚ್.ಸಿ.ಬಸವರಾಜು, ಸಮಾಜ ಸೇವಕ ಕೌಲನಹಳ್ಳಿ ಸೋಮಶೇಖರ್, ಮುಖಂಡರಾದ ರವಿ, ನಾಗೇಂದ್ರ, ಕಣಗಾಲು ಮಧು, ಯೋಗೇಶ್‌ಚಾರ್, ಚಪ್ಪರದಹಳ್ಳಿ ಗ್ರಾಮದ ಸಿ.ಕೆ.ಪ್ರಕಾಶ್, ಹರೀಶ್, ಮಹಾಲಿಂಗೇಗೌಡ, ಸತೀಶ್, ದರ್ಶನ್, ಸಂತೋಷ್, ಹಾರನಹಳ್ಳಿ ಗ್ರಾಮದ ಗೋವಿಂದೇಗೌಡ, ನಾರಾಯಣ್, ಪಾರ್ಥೇಗೌಡ, ಅಣ್ಣಯ್ಯಚಾರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net