ಪಾಲಕರ ಮೇಲಿದೆ ಮಕ್ಕಳಿಗೆ ಸಂಸ್ಕಾರ ಕಲಿಸುವ ಹೊಣೆ

CTDVIDYA VIKASA VIDAYA SAMSTE------------
Published on

ಚಿತ್ರದುರ್ಗ: ವಿದ್ಯೆಯೊಂದಿಗೆ ಮಕ್ಕಳಿಗೆ ಸಂಸ್ಕಾರ ಕಲಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪಾಲಕರ ಮೇಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಉಜ್ವಲಾ ವೀರಣ್ಣ ಸಿದ್ದಣ್ಣನವರ್ ಹೇಳಿದರು.

ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆ ಇತ್ತೀಚೆಗೆ ತರಾಸು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ‘ಕಿಡ್ಡೀ ಕಾರ್ನಿವಲ್’ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಮನೆಯಲ್ಲಿ ಪಾಲಕರು ಮಕ್ಕಳನ್ನು ಹೇಗೆ ಬೇಳೆಸುತ್ತಾರೋ ಹಾಗೆ ಸಮಾಜದಲ್ಲಿ ಅವರು ವ್ಯವಹರಿಸುತ್ತಾರೆ. ಕುಟುಂಬದ ಸದಸ್ಯರು ಮಗುವಿನ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಾರೆ. ಮೊಬೈಲ್‌ಗೀಳು ಹೋಗಲಾಡಿಸಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗುವಂತೆ ಪಾಲಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದರು.

ಬಿಇಒ ಎಸ್. ನಾಗಭೂಷಣ್ ಮಾತನಾಡಿ, ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಒಳ್ಳೆಯ ಸಂಸ್ಕಾರ ಕೊಡುವಂತಹ ವಾತವರಣ ನಿರ್ಮಾಣ ಮಾಡಬೇಕು. ಅದಕ್ಕಾಗಿ ಪೂರಕ ಚಟುವಟಿಕೆಗಳಲ್ಲಿ ತೊಡಗುವಂತೆ ನೋಡಿಕೊಳ್ಳಬೇಕು. ಪಾಲಕರು ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಿದರೆ ಸಮಾಜದ ಸ್ವಾಸ್ಥ್ಯ ಸದೃಢವಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಕಾರ್ಯದರ್ಶಿ ಬಿ. ವಿಜಯಕುಮಾರ್ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ವೃತ್ತಿಪರತೆ ಬೆಳೆಸಿಕೊಳ್ಳುವಂತೆ ಮಕ್ಕಳನ್ನು ಪ್ರೋತ್ಸಾಹಿಸ ಬೇಕು ಎಂದು ತಿಳಿಸಿದರು.

ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಎಸ್.ಪಿ. ಪ್ರತೀಕ್ಷಾ, ಬಿ.ಎಂ. ರಕ್ಷಾ, ಸಿ.ಇ. ಅಭಯ್ ಅವರಿಗೆ ವಿದ್ಯಾವಿಕಾಸ ರತ್ನ ಪ್ರಧಾನ ಹಾಗೂ ರಾಷ್ಟ್ರ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ 3 ನೇ ಸ್ಥಾನ ಪಡೆದ 9ನೇ ತರಗತಿಯ ಟಿ. ಜಾಗೃತ್ ಹಾಗೂ ಎಸ್. ಹರ್ಷವರ್ಧನ್ ಅವರನ್ನು ಗೌರವಿಸಲಾಯಿತು. ಚಿತ್ರಕಲಾ ಸ್ಪರ್ಧೆ ವಿಜೇತ ಪಾಲಕರಿಗೆ ಬಹುಮಾನ ವಿತರಿಸಲಾಯಿತು.

ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ. ಪೃಥ್ವೀಶ, ಸಂಸ್ಥೆ ನಿರ್ದೇಶಕರಾದ ಪಿ.ಸಿ. ಸುನಿತಾ, ಎನ್.ಎಸ್. ಸ್ನೇಹಾ, ಐಸಿಎಸ್‌ಇ ಪ್ರಾಚಾರ್ಯ ಪಿ. ಬಸವರಾಜಯ್ಯ, ಮುಖ್ಯಶಿಕ್ಷಕ ಎನ್.ಜಿ. ತಿಪ್ಪೇಸ್ವಾಮಿ ಇತರರು ಇದ್ದರು. ಉಪ ಪ್ರಾಚಾರ್ಯ ಬಿ. ಅವಿನಾಶ್ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕಿ ಪಿ.ವಿ. ರೇಖಾ ಸ್ವಾಗತಿಸಿದರು. ಶಿಕ್ಷಕಿ ಭಾಗ್ಯಶ್ರೀ ವಂದಿಸಿದರು. ಶಿಕ್ಷಕಿ ಕಾವ್ಯಾಯದುವಂಶ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net