

ಪಿರಿಯಾಪಟ್ಟಣ : ಕ್ರೈಸ್ತ ಪಾದ್ರಿಗಳ ಮೇಲೆ ಹಲ್ಲೆ ಮಾಡಿ ಶಾಂತಿಭಂಗ ಉಂಟು ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕ್ರೈಸ್ತ ಪಾದ್ರಿಗಳು ಮತ್ತು ಅನುಯಾಯಿಗಳು ಪಟ್ಟಣದ ತಾಲೂಕು ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.
ಕ್ರೈಸ್ತ ಮುಖಂಡ ಫಾ.ಸ್ಯಾಮೂಯಲ್ ಮಾತನಾಡಿ, ನಾವು ಭಾರತದ ಸಂವಿಧಾನವು ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಅಡಿಯಲ್ಲಿ ಬೇರೆ ಯಾವುದೇ ವ್ಯಕ್ತಿ ಮತ್ತು ಧರ್ಮಕ್ಕೆ ಧಕ್ಕೆಯುಂಟಾಗದಂತೆ ಸಂವಿಧಾನದ ಚೌಕಟ್ಟಿನಲ್ಲಿ ಕಾನೂನುಬದ್ಧವಾಗಿ ಪ್ರಾರ್ಥನಾಲಯಗಳಲ್ಲಿ ಪ್ರಾರ್ಥನೆ ಮತ್ತು ಕ್ರೈಸ್ತ ಧರ್ಮದ ಕೈಂಕರ್ಯಗಳನ್ನು ಮಾಡಿಕೊಂಡು ಬರುತ್ತಿರುತ್ತೇವೆ. ನಾವು ಕಾನೂನಿನ ಚೌಕಟ್ಟಿನಲ್ಲಿ ಕ್ರೈಸ್ತ ದೇವಸ್ಥಾನ ಮಾಡುತ್ತಿದ್ದು, ಸಭೆಗಳನ್ನು ನಡೆಸುತ್ತಿರುತ್ತೇವೆ. ಅಂತೆಯೇ ಪಿರಿಯಾಪಟ್ಟಣ ತಾಲೂಕು ಮರಡಿಯೂರು ಗ್ರಾಮದಲ್ಲಿ ಸ್ಟೆನ್ಸನ್ ಎಂಬುವರು ಹಲವು ವರ್ಷಗಳಿಂದ ಪ್ರಾರ್ಥನಾಲಯವನ್ನು ನಡೆಸಿಕೊಂಡು ಬರುತ್ತಿದ್ದು, ಯೇಸುಕ್ರಿಸ್ತರ ಶಾಂತಿ ಮತ್ತು ಸಹನೆಯ ಸಂದೇಶವನ್ನು ಸಾರುತ್ತ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ಟೆನ್ಸನ್ ಅವರು ಮರಡಿಯೂರು ಗ್ರಾಮದಲ್ಲಿ ಒಂದು ನಿವೇಶನ ಖರೀದಿಸಿ ವಾಸದಮನೆ ಮತ್ತು ಪ್ರಾರ್ಥನಾಲಯ ಕಟ್ಟಲು ಮುಂದಾಗಿದ್ದು ಈ ಕಟ್ಟಡ ನಿರ್ಮಾಣಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಟೆನ್ಸನ್ ಹೈಕೋರ್ಟ್ ಮೊರೆ ಹೋಗಿ ಕಾನೂನುಬದ್ಧವಾಗಿ ಕಟ್ಟಡವನ್ನು ಕಟ್ಟುತ್ತಿದ್ದಾರೆ. ಇದನ್ನು ಸಹಿಸದ ಕೆಲವು ಬಿಜೆಪಿ ಮತ್ತು ಆರ್‌ಎಸ್‌ಎಸ್ ಮುಖಂಡರು ಮರಡಿಯೂರು ಗ್ರಾಮದ ಜನರನ್ನು ಸ್ಟೆನ್ಸನ್ ವಿರುದ್ಧ ಎತ್ತಿಕಟ್ಟಿ ಕಟ್ಟಡ ನಿರ್ಮಾಣ ಮಾಡದಂತೆ ತಡೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಸ್ಟೆನ್ಸನ್ ಅವರು ಸ್ಥಳೀಯ ಪೊಲೀಸರ ಗಮನಕ್ಕೆ ವಿಚಾರವನ್ನು ತಂದು ನ್ಯಾಯಾಲಯದ ಆದೇಶವನ್ನು ಪೊಲೀಸರಿಗೆ ನೀಡಿ ಸೂಕ್ತ ಕಾನೂನು ಪಾಲನೆಯೊಂದಿಗೆ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಶೇ.90 ರಷ್ಟು ನಿರ್ಮಾಣದ ಕೆಲಸ ಮುಗಿದಿದ್ದರೂ ಸಹ ಕೆಲವರು ಮತ್ತೇ ಕೋರ್ಟ್ ತಡೆಯಾಜ್ಞೆ ತಂದು ನಿರ್ಮಾಣ ಕಾರ್ಯ ಸ್ಥಗಿತ ಮಾಡಿದ್ದರು, ಮತ್ತೆ ಸ್ಟೆನ್ಸ್‌ನ್ ಸೂಕ್ತ ದಾಖಲೆ ಹಾಜರುಪಡಿಸಿ ತಡೆಯಾಜ್ಞೆ ತೆರವುಗೊಳಿಸಿ ಕಟ್ಟಡ ನಿರ್ಮಾಣಕ್ಕೆ ಮರು ಆದೇಶ ಪಡೆದಿದ್ದಾರೆ ಎಂದು ತಿಳಿಸಿದರು.
ಸೈನ್ಸ್‌ನ್ ರವರ ಈ ಕ್ರಮಕ್ಕೆ ಆಕ್ರೋಶಗೊಂಡಿರುವ ಬಿಜೆಪಿ ತಾಲೂಕು ಅಧ್ಯಕ್ಷ ರಾಜೇಂದ್ರ ಮತ್ತು ಆರ್‌ಎಸ್‌ಎಸ್ ನ ಕೆಲವು ಕಾರ್ಯಕರ್ತರು ಸ್ಟೆನ್ಸ್‌ನ್ ಮತ್ತು ಅವರ ಪತ್ನಿ ಸೇರಿದಂತೆ ಇತರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು. ಕ್ರೈಸ್ತ ಪಾದ್ರಿಗಳಿಗೆ ಮತ್ತು ಅನುಯಾಯಿಗಳಿಗೆ ತೊಂದರೆ ನೀಡುತ್ತಿರುವ ಈ ಕೃತ್ಯಗಳಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಬೆಂಬಲ ಇದ್ದು ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ನಿಸರ್ಗಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯ ರವಿ, ಫಾ.ಗಿರೀಶ್, ಫಾ.ಅನಿಲ್, ಫಾ.ಸುರೇಶ, ಫಾ.ಅರ್ಜುನ್, ಬಾಳೆಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನಿಯಪ್ಪ, ಗ್ರಾಮಸ್ಥರಾದ ಜೀವನ, ವಿಶಾಲ್, ರಾಜೇಶ್, ದೀಕ್ಷಿತಾ, ಮಹಾದೇವಿ, ಲಕ್ಷ್ಮೀ, ಸರಸಾ, ಪ್ರವೀಣ್, ಮಂಜುಳಾ, ರಾಜ, ನಾಗಮ್ಮ ಸೇರಿದಂತೆ ಇತರರು ಇದ್ದರು.