

ಕಾಬುಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಗೆ ಮುತುವರ್ಜಿ ತೋರಿಸಿದ ಪಾಕಿಸ್ತಾನ ವಿರುದ್ಧ ಈಗ ತಾಲಿಬಾನಿಗಳ ಆಕ್ರೋಶ ವ್ಯಕ್ತವಾಗಿದೆ. ತಾಲಿಬಾನ್ ಕಮಾಂಡರ್ಗಳ ನಡುವಿನ ಮಾತುಕತೆಯ ಆಡಿಯೋ ವೈರಲ್ ಆಗಿರುವ ಕಾರಣ ಈ ವಿಚಾರ ಬಹಿರಂಗವಾಗಿದೆ. ಕೆಲ ಸಮಯ ಬಳಿಕ ಈ ಆಡಿಯೋ ಕ್ಲಿಪ್ ಫೇಸ್ಬುಕ್ನಿಂದ ಡಿಲೀಟ್ ಆಗಿದೆ.
ತಾಲಿಬಾನ್ ನಾಯಕರ ನಡುವಿನ ಆಂತರಿಕ ಬಿಕ್ಕಟ್ಟಿನ ಕಾರಣಕ್ಕೆ ಹೊಸ ಸರ್ಕಾರ ರಚನೆ ವಿಳಂಬವಾಗಿತ್ತು. ಇದನ್ನು ಮನಗಂಡ ತಾಲಿಬಾನ್ ಪೋಷಕ ಪಾಕಿಸ್ತಾನದ ಐಎಸ್ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಮತ್ತು ತಂಡ ಕಾಬುಲ್ಗೆ ಬಂದಿತ್ತು. ಅನೇಕ ಸುತ್ತುಗಳ ಮಾತುಕತೆ ಬಳಿಕ ಕಳೆದ ವಾರ ಮಧ್ಯಂತರ ಸರ್ಕಾರ ರಚನೆಯಾಗಿತ್ತು. ಈ ನಡುವೆ, ಕಳೆದ ಎರಡು ದಿನಗಳಿಂದ ಫೇಸ್ಬುಕ್ನಲ್ಲಿ ವೈರಲ್ ಆಗಿರುವ ತಾಲಿಬಾನ್ ಕಮಾಂಡರ್ಗಳ ಆಡಿಯೋ ಕ್ಲಿಪ್ ಆಂತರಿಕ ಬಿಕ್ಕಟ್ಟಿನ ಇನ್ನೊಂದು ಮುಖವನ್ನು ಬಹಿರಂಗಪಡಿಸಿದೆ.
ಆಡಿಯೋ ಕ್ಲಿಪ್ನಲ್ಲಿರುವ ಅಂಶ..: ಆಡಿಯೋ ಕ್ಲಿಪ್ನಲ್ಲಿ, ತಾಲಿಬಾನ್ ಕಮಾಂಡರ್ಗಳ ಮಾತುಕತೆ ಕೇಳಿಬಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಘನತೆಯನ್ನು ಪಾಕಿಸ್ತಾನ ಹಾಳುಗೆಡವಿತು. ಐಎಸ್ಐ ಮುಖ್ಯಸ್ಥ ಹಮೀದ್ ಕ್ಯಾಬಿನೆಟ್ನಲ್ಲಿ ಹಕ್ಕಾನಿ ಮತ್ತು ಕ್ವೆಟ್ಟಾ ಶುರಾ ನಾಯಕರ ಹೆಸರುಗಳನ್ನು ಪ್ರಸ್ತಾಪಿಸಿದ್ದ. ಉಳಿದವರನ್ನು ಆತ ಕಡೆಗಣಿಸಿದ. ಈ ಪಂಜಾಬಿ ಜನರಲ್ ಹಮೀದ್ ನಮ್ಮ ಪಾಲಿಗೆ ದೊಡ್ಡ ಸಮಸ್ಯೆಯನ್ನೇ ಸೃಷ್ಟಿಸಿಬಿಟ್ಟ ಎಂಬ ಸಂಭಾಷಣೆ ಇದರಲ್ಲಿದೆ. ವೈರಲ್ ಆದ ಆಡಿಯೋ ಕ್ಲಿಪ್ನಲ್ಲಿ ಮೊದಲು ಕೇಳಿದ ಧ್ವನಿ ಮುಲ್ಲಾ ಫಝೇಲ್ದು ಎಂದು ಹೇಳಲಾಗುತ್ತಿದೆ. ಈತ ತಾಲಿಬಾನ್ನ ಹೊಸ ಸರ್ಕಾರದಲ್ಲಿ ಡೆಪ್ಯೂಟಿ ರಕ್ಷಣಾ ಸಚಿವ. ಎಲ್ಲರನ್ನೂ ಒಳಗೊಂಡ ಸರ್ಕಾರ ರಚಿಸುವ ತಾಲಿಬಾನ್ ಪ್ರಯತ್ನಕ್ಕೆ ಪಾಕಿಸ್ತಾನ ಕಲ್ಲು ಹಾಕಿತು. ಮಾತುಕತೆ ವೇಳೆ ಗುಂಡಿನ ದಾಳಿ ನಡೆಯೋದಕ್ಕೂ ಇದುವೇ ಕಾರಣ. ಪ್ರೆಸಿಡೆನ್ಶಿಯಲ್ ಪ್ಯಾಲೇಸ್ನಲ್ಲಿ ತಾಲಿಬಾನ್ ಕಮಾಂಡರ್ಗಳು ಮತ್ತು ಐಎಸ್ಐ ಮುಖ್ಯಸ್ಥರ ಬಾಡಿಗಾರ್ಡ್ಗಳ ನಡುವೆ ಗುಂಡಿನ ಚಕಮಕಿ ನಡೆಯಿತೇ ಹೊರತು ಬೇರೇನೂ ಅಲ್ಲ ಎನ್ನಲಾಗಿದೆ.
ಗೇಮ್ ಪ್ಲ್ಯಾನ್ ಬದಲು: ಎಲ್ಲರನ್ನೂ ಸೇರಿಸಿಕೊಂಡು ಸರ್ಕಾರ ರಚಿಸುವ ತಾಲಿಬಾನ್ ನಾಯಕರ ಪ್ರಯತ್ನಕ್ಕೆ ಕಾಬುಲ್ನಲ್ಲಿರುವ ಪಾಕಿಸ್ತಾನದ ರಾಯಭಾರಿ ಮನ್ಸೂರ್ ಅಹ್ಮದ್ ಖಾನ್ ಅಡ್ಡಿಪಡಿಸಿದ. ಐಎಸ್ಐ ಮುಖ್ಯಸ್ಥ ಹಮೀದ್ಗೆ ವಿಷಯ ಮುಟ್ಟಿಸಿದ. ಇದರ ಬೆನ್ನಿಗೆ ಹಮೀದ್ ಮತ್ತು ತಂಡ ಕಾಬುಲ್ನಲ್ಲಿ ಇಳಿಯಿತು. ಹಕ್ಕಾನಿ ನೆಟ್ವರ್ಕ್ನ ಸಿರಾಜುದ್ದೀನ್ ಹಕ್ಕಾನಿ ಮತ್ತು ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್ ಪುತ್ರ ಮೊಹಮ್ಮದ್ ಯಾಕೂಬ್ ಮುಜಾಹಿದ್ ನೆರವಿನೊಂದಿಗೆ ತಾಲಿಬಾನ್ ಲೆಕ್ಕಾಚಾರವನ್ನು ಹಮೀದ್ ತಲೆಕೆಳಗಾಗಿಸಿದ. ಮುಲ್ಲಾ ಮೊಹಮ್ಮದ್ ಹಸನ್ ಅಖುಂಡ್ ನೇತೃತ್ವದ ಸರ್ಕಾರ ರಚನೆ ಖಾತರಿಯಾಯಿತು.
ಅಧಿಕಾರ ಸ್ವೀಕಾರ ರದ್ದು!: ತಾಲಿಬಾನ್ ಹೊಸ ಸರ್ಕಾರದ ಅಧಿಕಾರ ಸ್ವೀಕಾರ ಸಮಾರಂಭ 9/11ರಂದು ನಡೆಯಲಿದೆ ಎಂದು ಘೋಷಿಸಲಾಗಿತ್ತು. ಆದರೆ ದುಂದುವೆಚ್ಚ ತಪ್ಪಿಸುವುದಕ್ಕಾಗಿ ಸರ್ಕಾರದ ಅಧಿಕಾರ ಸ್ವೀಕಾರ ಸಮಾರಂಭ ರದ್ದುಗೊಳಿಸಲಾಗಿದೆ ಎಂದು ತಾಲಿಬಾನ್ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದೆ. ಈ ನಡುವೆ, ಸರ್ಕಾರದ ಪ್ರಮಾಣ ಸಮಾರಂಭದಲ್ಲಿ ರಷ್ಯಾ ಭಾಗವಹಿಸುವುದಿಲ್ಲ ಎಂದು ಹೇಳಿತ್ತು. ರಷ್ಯಾ ಮಾಧ್ಯಮಗಳಲ್ಲಿ ವರದಿಯಾದ ಪ್ರಕಾರ, ಕತಾರ್ ಸರ್ಕಾರದ ಮೇಲೆ ಅಮೆರಿಕ ಮತ್ತು ನಾಟೋ ಮೈತ್ರಿ ನಾಯಕರು ಒತ್ತಡ ಹೇರಿ ತಾಲಿಬಾನ್ ಅಧಿಕಾರ ಸ್ವೀಕಾರ ರದ್ದುಗೊಳಿಸುವಂತೆ ಮಾಡಿದರು.
21 ಅಮೆರಿಕನ್ನರ ಸ್ಥಳಾಂತರ: ಕತಾರ್ ಏರ್ವೇಸ್ ಮೂಲಕ ಕಾಬುಲ್ನಿಂದ ಇನ್ನೂ 21 ಅಮೆರಿಕನ್ನರನ್ನು ಸ್ಥಳಾಂತರಿಸಲಾಗಿದೆ. ಈ ಪೈಕಿ 11 ಗ್ರೀನ್ ಕಾರ್ಡ್ ಇರುವಂಥವರು. ಎಲ್ಲರೂ ದೋಹಾ ತಲುಪಿದ್ದು ಅಲ್ಲಿಂದ ಅಮೆರಿಕ ಬರಲಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.
ಅಫ್ಘನ್ನಲ್ಲಿ 97% ಬಡತನ: ತಾಲಿಬಾನ್ ಆಡಳಿತಕ್ಕೆ ಒಳಪಟ್ಟಿರುವ ಅಫ್ಘನ್ನಲ್ಲಿ ಮುಂದಿನ ವರ್ಷದ ಮಧ್ಯಭಾಗದಲ್ಲಿ ಶೇಕಡ 97ರಷ್ಟು ಬಡತನ ಕಾಡಲಿದೆ. ಈಗಾಗಲೇ ಬಡತನ ವಿಸ್ತರಿಸಲಾರಂಭಿಸಿದೆ. ಜಿಡಿಪಿ ಈಗಾಗಲೇ ಮೈನಸ್ 13.2ಕ್ಕೆ ಇಳಿದಿದೆ. ಇದು ಬಡತನವನ್ನು ಶೇಕಡ 25ರಷ್ಟು ಏರಿಸಿದೆ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ ವರದಿ ತಿಳಿಸಿದೆ.
ಅಮ್ರುಲ್ಲಾ ಸಾಲ್ಹೇ ಸಹೋದರನ ಹತ್ಯೆ: ಅಫ್ಘನ್ನ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಾಲ್ಹೇ ಅವರ ಸಹೋದರನನ್ನು ತಾಲಿಬಾನಿಗಳು ಗುಂಡಿಟ್ಟು ಹತ್ಯೆ ಮಾಡಿದರು. ಪಂಜ್ಶೀರ್ನಲ್ಲಿ ರೌಹುಲ್ಲಾ ಅಝೀಝಿಯನ್ನು ಬಂಧಿಸಿದ ತಾಲಿಬಾನಿಗಳು, ಆತನ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದರು. ಶವ ಸಂಸ್ಕಾರಕ್ಕೂ ಅವಕಾಶ ನೀಡಿಲ್ಲ. ಅದು ಕೊಳೆತು ಹೋಗಬೇಕು ಎಂದು ಎಚ್ಚರಿಸಿ ಹೋದರು ಎಂದು ಸೋದರ ಸಂಬಂಧಿ ಅಬ್ದುಲ್ಲಾ ಸಾಲ್ಹೇ ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.