ಪಶುವೈದ್ಯ ಪ್ರಾಧ್ಯಾಪಕರಿಗೆ ಫಜೀತಿ: ನಿಯೋಜನೆ ಮೇಲೆ ಬಂದ 22 ಮಂದಿ ಅತಂತ್ರ; ಶೇ. 40 ಹುದ್ದೆ ಖಾಲಿ..

Veterinery
Published on

| ವಿಲಾಸ ಮೇಲಗಿರಿ ಬೆಂಗಳೂರು

ಪಶುವೈದ್ಯ ಪದವಿ ಕೋರ್ಸ್​ಗಳು ಇನ್ನೇನು ಆರಂಭವಾಗುತ್ತಿವೆ. ರಾಜ್ಯದಲ್ಲಿ ಐದು ಪಶುವೈದ್ಯ ಮಹಾವಿದ್ಯಾಲಯಗಳಿದ್ದು, ಒಂದೇ ಒಂದು ಕಾಲೇಜಿನಲ್ಲೂ ಪೂರ್ಣ ಪ್ರಮಾಣದ ಪ್ರಾಧ್ಯಾಪಕರಿಲ್ಲ!ಬೀದರ್​ನಲ್ಲಿರುವ ಪಶುವೈದ್ಯಕೀಯ ವಿವಿ ಪ್ರಾರಂಭವಾಗಿ 16 ವರ್ಷ ಕಳೆದರೂ ಎರಡು ಬಾರಿ ಮಾತ್ರ ನೇಮಕಾತಿ ನಡೆದಿದೆ. ತರುವಾಯ ನೇಮಕಾತಿಗೆ ಸರ್ಕಾರ/ಆರ್ಥಿಕ ಇಲಾಖೆ ಅನುಮೋದನೆ ಕೊಟ್ಟರೂ ವಿಶ್ವವಿದ್ಯಾಲಯ ನೇಮಕಾತಿ ನಿಯಮಾವಳಿಯಲ್ಲಿ ಮಾಡಿದ ಎಡವಟ್ಟಿನಿಂದ ಯಾವ ನೇಮಕವೂ ನಡೆದಿಲ್ಲ. ಇದರಿಂದಾಗಿ ಶೇ.40 ಹುದ್ದೆಗಳು ಖಾಲಿ ಬಿದ್ದಿವೆ.

ಭಾರತೀಯ ಪಶುವೈದ್ಯ ಪರಿಷತ್​ನಿಂದ ಕಾಲೇಜುಗಳಿಗೆ ಮಾನ್ಯತೆ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಹಿನ್ನೆಲೆಯಲ್ಲಿ ಪಶುವೈದ್ಯ ಇಲಾಖೆ ಯಲ್ಲಿದ್ದ ಅರ್ಹ ಪಶು ವೈದ್ಯಾಧಿಕಾರಿಗಳನ್ನು (ಎನ್​ಇಟಿ/ಪಿಎಚ್​ಡಿ ತೇರ್ಗಡೆ ಹೊಂದಿದ) ನಿಯೋಜನೆ ಮೇಲೆ ಕಳಿಸಲಾಗುತ್ತದೆ. ಹೀಗೆ ಕಳುಹಿಸಿದ 22 ಪಶು ವೈದ್ಯರು ಈಗ ಅಕ್ಷರಶಃ ಅತಂತ್ರರಾಗಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿಯೋಜನೆ ಮೇಲೆ ಪಶುವೈದ್ಯ ಮಹಾವಿದ್ಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ವಿಶ್ವವಿದ್ಯಾಲಯದ ಸೇವೆಯಲ್ಲಿ ವಿಲೀನಗೊಳಿಸಬೇಕು ಎಂದು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡರೂ ಸೇವಾ ವಿಲೀನಗೊಳಿಸುವ ಕಡತಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ.

ಇಲಾಖೆಯಲ್ಲಿ ದ್ವಂದ್ವ ನೀತಿ: ಈ ನಡುವೆ 2020ರ ಜೂನ್ 9 ರಂದು ಪಶುವೈದ್ಯ ಮಹಾವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಬರೋಬ್ಬರಿ ಒಂಭತ್ತು ವರ್ಷ ಕಾರ್ಯನಿರ್ವಹಿಸಿದ್ದ ಪಶುವೈದ್ಯಾಧಿಕಾರಿಗಳು ಸೇರಿ ಅನ್ಯ ಸೇವೆ ನಿಮಿತ್ತ ನಿಯೋಜನೆ ಮೇಲೆ ಇತರೆ ಇಲಾಖೆ ಮತ್ತು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ/ಕಿರಿಯ/ಪಶು ವೈದ್ಯಾಧಿಕಾರಿಗಳ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಾತೃ ಇಲಾಖೆಗೆ ವಾಪಸ್ಸಾಗಲು ಸರ್ಕಾರ ಆದೇಶ ಮಾಡಿದೆ. ಆದರೆ, ಯಾರೊಬ್ಬರೂ ಮಾತೃ ಇಲಾಖೆಗೆ ಮರಳಿಲ್ಲ.

ಈ ಆದೇಶ ಹೊರ ಬಿದ್ದ ಕೂಡಲೇ ನಿಯೋಜನೆ ಮೇಲೆ ಪಶು ವೈದ್ಯಕೀಯ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 22 ಪಶುವೈದ್ಯಾಧಿಕಾರಿಗಳು, ವಿಶ್ವವಿದ್ಯಾಲಯದಲ್ಲಿ ತಮ್ಮ ಸೇವಾ ವಿಲೀನ ಪ್ರಕ್ರಿಯೆ ನಡೆಯುತ್ತಿದ್ದು ಮಾತೃ ಇಲಾಖೆಗೆ ವಾಪಸ್ ಆಗಬೇಕೆಂಬ ಆದೇಶಕ್ಕೆ ಆರು ತಿಂಗಳು ವಿನಾಯಿತಿ ನೀಡಬೇಕೆಂದು ಕೋರಿದ್ದರು. ಆದರೆ, ಆ ಆರು ತಿಂಗಳು ಕಳೆದರೂ ವಿಶ್ವವಿದ್ಯಾಲಯ ನಿಯೋಜಿತ ಪ್ರಾಧ್ಯಾಪಕರನ್ನು ಸೇವೆಯಲ್ಲಿ ವಿಲೀನ ಮಾಡಿಕೊಂಡಿಲ್ಲ.

ಗದಗ ಕಾಲೇಜಿಗೆ ಹೋಗಲಿಲ್ಲ...: 26 ಪಶುವೈದ್ಯರನ್ನು ಗದಗ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬೋಧನಾ ಚಟುವಟಿಕೆ ಕೈಗೊಳ್ಳಲು ಎಂವಿಎಸ್ಸಿ ಮತ್ತು ಪಿಎಚ್​ಡಿ ವಿದ್ಯಾರ್ಹತೆ ಹೊಂದಿರುವ ಪಶುವೈದ್ಯರನ್ನು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನಿಯೋಜನೆ ಮೇಲೆ ತೆರಳುವಂತೆ ಮತ್ತು ಆ ಸಂಬಂಧ ಕರ್ನಾಟಕ ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವರದಿ ಮಾಡಿಕೊಳ್ಳುವಂತೆ 2021ರ ಜೂನ್ 7 ರಂದು ಸರ್ಕಾರ ಮತ್ತೊಂದು ಆದೇಶ ಮಾಡಿದೆ. ಆದರೆ, ಪಶುವೈದ್ಯಾಧಿಕಾರಿಗಳು ಈ ಆದೇಶಕ್ಕೆ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯಿಂದ ತಡೆಯಾಜ್ಞೆ ತಂದು ಸರ್ಕಾರಕ್ಕೆ ಚಳ್ಳೆಹಣ್ಣು ತಿನ್ನಿಸಿದ್ದಾರೆ.

ಅಲ್ಲದೆ, ಹಣಕಾಸು ಇಲಾಖೆ ಅನುಮೋದನೆ ನೀಡಿದರೂ ವಿಶ್ವವಿದ್ಯಾಲಯ ಬೋಧಕರನ್ನು ನೇಮಕ ಮಾಡಿಕೊಂಡಿಲ್ಲ. ಈ ಎಲ್ಲ ಗೊಂದಲಗಳಿಂದ ಪಶುವೈದ್ಯ ಮಾಹವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವುದು ಕಷ್ಟವಾಗಿದೆ. ಇನ್ನು, ಪಶುವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಪೂರ್ಣ ಪ್ರಾಮಾಣದಲ್ಲಿ ಬೋಧಕರು ಇಲ್ಲದೇ ಇರುವ ಕಾರಣ ನೀಡಿ ವಿಸಿಐ ಮಾನ್ಯತೆ ನವೀಕರಿಸದೇ ಇದ್ದರೆ, ಎಲ್ಲ ಐದೂ ಕಾಲೇಜುಗಳ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿ ಸಿಲುಕುವುದು ನಿಶ್ಚಿತ.

ಒಪ್ಪಿಗೆ ಇಲ್ಲದೇ ನಿಯೋಜನೆ?: ಗದಗ ಪಶುವೈದ್ಯ ಕಾಲೇಜಿಗೆ ನಿಯೋಜನೆ ತೆರಳುವ ವಿಚಾರದಲ್ಲಿ ಸರ್ಕಾರ ಪಶುವೈದ್ಯರ ಒಪ್ಪಿಗೆ ಪಡೆದಿಲ್ಲ. ಒಪ್ಪಿಗೆ ಪಡೆಯದೇ ನಿಯೋಜನೆ ಮಾಡಿದ್ದನ್ನು ವಿರೋಧಿಸಿ ಪಶುವೈದ್ಯರು ನ್ಯಾಯಾಲಯದ ತಡೆಯಾಜ್ಞೆ ತಂದಿದ್ದಾರೆ.

ಮಾನ್ಯತೆಗಾಗಿ ನಾಟಕ!: ಭಾರತೀಯ ಪಶುವೈದ್ಯ ಪರಿಷತ್ (ವಿಸಿಐ)ನಿಂದ ಪಶುವೈದ್ಯಕೀಯ ಮಹಾವಿದ್ಯಾಲಯಗಳಿಗೆ ಮಾನ್ಯತೆ ಪಡೆಯಲು ಸರ್ಕಾರ ತಂತ್ರಗಾರಿಕೆ ಕಂಡುಕೊಂಡಿದೆ. ಮಾನ್ಯತೆ ನೀಡಲು ವಿಸಿಐ ತಂಡ ಬರುವ ಹಿನ್ನೆಲೆಯಲ್ಲಿ ಮೇ, ಜೂನ್ ವೇಳೆಗೆ ಬೆಂಗಳೂರು ಕಾಲೇಜಿನ ಕೆಲವು ಪ್ರಾಧ್ಯಾಪಕರನ್ನು ಅವಶ್ಯವಿರುವ ಕಾಲೇಜುಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ತಂಡ ಭೇಟಿ ನೀಡಿ ಮಾನ್ಯತೆ ನವೀಕರಿಸಿದ ಬೆನ್ನಲ್ಲೇ ಪ್ರಾಧ್ಯಾಪಕರು ಮರಳಿ ತಮ್ಮ ಸ್ವ-ಸ್ಥಾನಕ್ಕೆ ಬಂದು ಕೂರುತ್ತಾರೆ. ಕಳೆದ 2 ವರ್ಷದಿಂದ ಈ ಬೃಹನ್ನಾಟಕ ಕೂಡ ನಡೆಯುತ್ತಿದೆ.

ಗೊಂದಲದ ಆದೇಶಗಳು: ಒಂದು ಬಾರಿ ನಿಯೋಜನೆ ಮೇಲೆ ತೆರಳಿರುವ ಪಶುವೈದ್ಯಾಧಿಕಾರಿಗಳನ್ನು ಮಾತೃ ಇಲಾಖೆಗೆ ಬರುವಂತೆ ಆದೇಶ ಹೊರಡಿಸುವುದು, ಇನ್ನೊಂದೆಡೆ ಇಲಾಖೆಯಲ್ಲಿರುವ ಪಶುವೈದ್ಯರನ್ನು ಕಾಲೇಜುಗಳಿಗೆ ಕಳಿಸುವ ಮೂಲಕ ಪಶುವೈದ್ಯ ಇಲಾಖೆ ದ್ವಂದ್ವ ನಿಲುವು ತಳೆದಿದೆ. ಇದು ಪಶುವೈದ್ಯಾಧಿಕಾರಿಗಳಲ್ಲಿ ಗೊಂದಲ ಉಂಟು ಮಾಡಿದೆ.

ಸರ್ಕಾರ ಮೀನಮೇಷ: ತಮಿಳುನಾಡು ಮತ್ತು ಆಂಧ್ರಪ್ರದೇಶ ಸರ್ಕಾರಗಳು ಪಶುವೈದ್ಯ ಸ್ನಾತಕೋತ್ತರ ಪದವೀಧರರನ್ನು ಪಶುವೈದ್ಯ ಕಾಲೇಜುಗಳಿಗೆ ಷರತ್ತಿನ ಮೇಲೆ ನೇಮಕ ಮಾಡಿಕೊಂಡಿವೆ. ಅವರಿಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಎನ್​ಇಟಿ) ಪಾಸು ಮಾಡಲು ಆರು ವರ್ಷ ಕಾಲಾವಕಾಶ ನೀಡಿವೆ. ಆದರೆ, ಎನ್​ಇಟಿ/ಪಿಎಚ್​ಡಿ ಪದವಿ ಪಡೆದು ನಿಯೋಜನೆ ಮೇಲೆ 9 ವರ್ಷದಿಂದ ಕೆಲಸ ಮಾಡುತ್ತಿರುವವರನ್ನು ವಿಶ್ವವಿದ್ಯಾಲಯದಲ್ಲಿ ಸೇವಾ ವಿಲೀನಗೊಳಿಸಲು ಕರ್ನಾಟಕ ಸರ್ಕಾರ ಮೀನಮೇಷ ಎಣಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net