ಪಶು ಆಹಾರದ ಬದಲು ಮೇವಿನ ಗಿಡ ಬೆಳೆಯಿರಿ

ತಿ.ನರಸೀಪುರ ತಾಲೂಕು ಕೋಣಗಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಏರ್ಪಡಿಸಿದ್ದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾರ್ಗ ವಿಸ್ತರಣಾಧಿಕಾರಿ ಪ್ರಮೋದ್ ಮಾತನಾಡಿದರು.
11tnpnewsfile01
Published on

ತಿ.ನರಸೀಪುರ: ರೈತರು ಹೈನುಗಾರಿಕೆಯಲ್ಲಿ ಪಶು ಆಹಾರ ಕಡಿಮೆ ಮಾಡಿ ತಮ್ಮ ಜಮೀನಿನಲ್ಲಿ ಮೇವಿನ ಗಿಡ ಬೆಳೆದು ಹಸುಗಳಿಗೆ ನೀಡಿದರೆ ಉತ್ಪಾದನಾ ವೆಚ್ಚ ಕಡಿಮೆ ಮಾಡಿಕೊಳ್ಳಬಹುದು ಎಂದು ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಮಾರ್ಗ ವಿಸ್ತರಣಾಧಿಕಾರಿ ಪ್ರಮೋದ್ ಹೇಳಿದರು.

ತಾಲೂಕಿನ ಕೋಣಗಳ್ಳಿ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಹೈನುಗಾರಿಕೆಯಲ್ಲಿ ಪಶು ಆಹಾರ ಕಡಿಮೆ ಮಾಡಿ ಮೇವಿನ ಬೆಳೆಗಳಾದ ಅಗಸೆ ಗಿಡ,ನುಗ್ಗೇಗಿಡ, ಕುದುರೆ ಬೇಲಿ ಮಸಾಲೆಯಂತಹ ಬೆಳೆಗಳನ್ನು ಬೆಳೆದು ಹಸುಗಳಿಗೆ ನೀಡಿದರೆ ಹಾಲಿನ ಉತ್ಪಾದನೆ ಜಾಸ್ತಿಯಾಗಲಿದೆ. ಗುಣಮಟ್ಟ ಸಹ ಉತ್ತಮವಾಗಿರುತ್ತದೆ. ಹಾಗಾಗಿ ರೈತರು ತಮಗಿರುವ ಜಮೀನಿನಲ್ಲಿ ಮೇವಿನ ಗಿಡಗಳನ್ನು ಬೆಳೆದು ಉತ್ಪಾದನಾ ವೆಚ್ಚ ಕಡಿಮೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಮೇವಿನ ಗಿಡಗಳ ಬೀಜಗಳನ್ನು ಒಕ್ಕೂಟದ ವತಿಯಿಂದ ರಿಯಾಯಿತಿ ದರದಲ್ಲಿ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಸಹಕಾರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು 1 ಗುಂಟೆ ನಿವೇಶನ ಖರೀದಿಸಿದರೆ ಮೈಮುಲ್ ಮಾಜಿ ಅಧ್ಯಕ್ಷ ಓಂಪ್ರಕಾಶ್, ಸದಸ್ಯ ಚೆಲುವರಾಜು ಅವರಿಂದ ಅನುದಾನ ಕೊಡಿಸಲಾಗುವುದು ಎಂದು ತಿಳಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಶ್ಮಿ 2022-23 ನೇ ಸಾಲಿನ ವಾರ್ಷಿಕ ವರದಿ ಮಂಡಿಸಿ, ಸಂಘವು ಪ್ರಸಕ್ತ ಸಾಲಿನಲ್ಲಿ 95,123 ರೂ. ನಿವ್ವಳ ಲಾಭ ಗಳಿಸಿದೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಂಘದ ಸದಸ್ಯರಿಗೆ ಬೋನಸ್ ಹಣ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ಸಂಘದ ಅಧ್ಯಕ್ಷೆ ಜಯಮ್ಮ, ನಿರ್ದೇಶಕರಾದ ಭಾಗ್ಯಮ್ಮ, ಲಕ್ಷ್ಮೀ, ಮಂಜುಳಾ, ರತ್ನಮ್ಮ, ನಂಜಮ್ಮಣಿ, ಶಿವಮ್ಮ, ಶೈಲಜ, ರತ್ನಮ್ಮ, ಹಾಲು ಪರೀಕ್ಷಕಿ ಲೀಲಾವತಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net