ಪವಿತ್ರಾಗೌಡ ಮನೆ ಖರೀದಿಗೆ ಹಣ ನೀಡಿದ್ದ ಸೌಂದರ್ಯ ಜಗದೀಶ್?

Pavithra gowda
Published on

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪವಿತ್ರಾಗೌಡಗೆ ಇತ್ತೀಚೆಗಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದ ನಿರ್ಮಾಪಕ ಸೌಂದರ್ಯ ಜಗದೀಶ್ ಖಾತೆಯಿಂದ ೨ ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಸೌಂದರ್ಯ ಜಗದೀಶ್ ಆತ್ಮಹತ್ಯೆಗೂ ಈ ಹಣದ ವರ್ಗಾವಣೆಗೂ ಯಾವುದಾದರೂ ಸಂಬಂಧ ಇದೆಯಾ ಎಂದು ಶಂಕೆ ವ್ಯಕ್ತವಾಗಿದೆ.
ರಾಜಾಜಿನಗರದಲ್ಲಿರುವ ಬ್ಯಾಂಕ್‌ವೊಂದರಲ್ಲಿನ ಪವಿತ್ರಾ.ಪಿ ಎಂಬ ಖಾತೆಗೆ ೨೦೧೭ರಲ್ಲಿ ೧ ಕೋಟಿ ರೂ. ಮತ್ತು ೨೦೧೮ರಲ್ಲಿ ೧ ಕೋಟಿ ರೂ. ಅನ್ನು ಸೌಂದರ್ಯ ಜಗದೀಶ್ ವರ್ಗಾವಣೆ ಮಾಡಿದ್ದಾರೆ ಎಂಬುದು ಗೊತ್ತಾಗಿದೆ.
ಈ ಸಂಬಂಧ ಪೊಲೀಸರು, ಕೊಲೆ ಪ್ರಕರಣದ ಆರೋಪಿ ಪವಿತ್ರಾಗೌಡ ಹಾಗೂ ಹಣ ವರ್ಗಾವಣೆಯಾದ ಪಿ.ಪವಿತ್ರಾ ಇಬ್ಬರು ಒಬ್ಬರೇ ಎಂಬ ನಿಟ್ಟಿನಲ್ಲಿ ತನಿಖೆ ಆರಂಭಿಸಿದ್ದಾರೆ.
ಇದೇ ವರ್ಷ ಏಪ್ರಿಲ್ ೧೪ರಂದು ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿದ್ದರು.ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಅದಾದ ಮೇಲೆ ಮೇ ೨೪ರಂದು ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ ೬೦ ಕೋಟಿ ರೂ. ವಂಚನೆಯಿಂದ ಪತಿ ನೊಂದಿದ್ದರು ಎಂದು ಪಾಲುದಾರರ ಮೇಲೆ ಶಂಕೆ ವ್ಯಕ್ತಪಡಿಸಿ ಠಾಣೆಗೆ ದೂರು ನೀಡಿದ್ದರು. ಪ್ರತ್ಯೇಕ ದೂರು ನೀಡಿದ್ದರಿಂದ ಆತ್ಮಹತ್ಯೆ ಪ್ರಚೋದನೆ ಆಯಾಮದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದರು.
ಸೌಂದರ್ಯ ಜಗದೀಶ್ ಅವರು ಸೌಂದರ್ಯ ಕನ್‌ಸ್ಟ್ರಕ್ಷನ್ ಕಂಪನಿ ನಡೆಸುತ್ತಿದ್ದರು. ವಿ.ಎಸ್.ಸುರೇಶ್, ಎಸ್.ಪಿ. ಹೊಂಬಣ್ಣ ಹಾಗೂ ಸುಧೀಂದ್ರ ಅವರು ಕಂಪನಿಯ ಸಹ ಪಾಲುದಾರರು ಆಗಿದ್ದರು. ತಮ್ಮ ಕೆಲ ಆಸ್ತಿಯನ್ನು ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಸೌಂದರ್ಯ ಜಗದೀಶ್, ೬೦ ಕೋಟಿ ರೂ. ಸಾಲ ಪಡೆದು ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು. ಕಂಪನಿ ನಷ್ಟದಲ್ಲಿರುವುದಾಗಿ ಹೇಳಿದ್ದ ಸಹ ಪಾಲುದಾರರು ೬೦ ಕೋಟಿ ರೂ. ವಂಚಿಸಿದ್ದರು ಎಂದು ಹೇಳಲಾಗಿದೆ. ಜತೆಗೆ, ಸೌಂದರ್ಯ ಜಗದೀಶ್ ಅವರಿಂದ ಹಲವು ದಾಖಲೆಗಳಿಗೆ ಸಹಿ ಪಡೆದುಕೊಂಡಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ಸಹ ಪಾಲುದಾರರು, ಜೀವ ಬೆದರಿಕೆಯೊಡ್ಡಿದ್ದರು. ಈ ಕಿರುಕುಳದಿಂದಲೇ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ಧಾರೆ ಎಂದು ಪತ್ನಿ ಶಶಿರೇಖಾ ದೂರಿನಲ್ಲಿ ಆರೋಪಿಸಿದ್ದರು. ಸೌಂದರ್ಯ ಜಗದೀಶ್ ಅವರ ಕೊಠಡಿಯಲ್ಲಿದ್ದ ಬಟ್ಟೆಯಲ್ಲಿ ಮರಣ ಪತ್ರವೊಂದು ಸಿಕ್ಕಿತ್ತು. ಅದೇ ಮರಣಪತ್ರ ಆಧರಿಸಿ ಪತ್ನಿ ದೂರು ನೀಡಿದ್ದರು. ಅದನ್ನು ಆಧರಿಸಿಯೇ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪಾಲುದಾರರಿಂದ ಪೊಲೀಸರಿಗೆ ಮಾಹಿತಿ:
ಸೌಂದರ್ಯ ಜಗದೀಶ್ ವ್ಯವಹಾರದ ಪಾಲುದಾರರಾಗಿರುವ ಸುರೇಶ್, ಸೌಂದರ್ಯ ಜಗದೀಶ್ ವ್ಯವಹಾರದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಮಾಹಿತಿಯಲ್ಲಿ ಸೌಂದರ್ಯ ಜಗದೀಶ್ ಪಿ.ಪವಿತ್ರಾ ಎಂಬುವರಿಗೆ ೨ ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ. ಈ ಹಣದಲ್ಲಿ ಪವಿತ್ರಾಗೌಡ ೨೦೧೮ ರಲ್ಲಿ ಆರ್.ಆರ್.ನಗರದ ಕೆಂಚನಹಳ್ಳಿಯಲ್ಲಿ ೧.೭೫ ಕೋಟಿ ರೂ. ಮೌಲ್ಯದ ಮನೆ ಖರೀದಿಸಿದ್ದರು ಎಂದು ಹೇಳಲಾಗಿದೆ.ಜತೆಗೆ ಮನೆ ಖರೀದಿ ಪತ್ರದಲ್ಲಿ ನಿರ್ಮಾಪಕ ಸೌಂದರ್ಯ ಜಗದೀಧ್ ಸಾಕ್ಷಿಯಾಗಿ ಸಹಿ ಕೂಡ ಹಾಕಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net