

ಬೆಂಗಳೂರು: ನಟಿ ಪವಿತ್ರಗೌಡ ಜೈಲಿನಿಂದ ಬಿಡುಗಡೆಯಾಗಿರುವುದಕ್ಕೆ ಅವರ ಮಾಜಿ ಪತಿ ಸಂತಸ ವ್ಯಕ್ತಪಡಿಸಿದ್ದಾರೆ.
ನಟಿ ಪವಿತ್ರಾಗೌಡರ ಬಿಡುಗಡೆಯ ದಿನವೇ ನಗರಕ್ಕೆ ಬಂದಿದ್ದ ಅವರ ಮಾಜಿ ಪತಿ ಸಂಜಯ್‌ಸಿಂಗ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಪವಿತ್ರಾಗೌಡ ಮೇಲಿನ ಒಲಿವಿನಿಂದ ನಾನು ಬೆಂಗಳೂರಿಗೆ ಬಂದಿಲ್ಲ. ಇದನ್ನೆಲ್ಲಾ ಮಾಡಲು ನನಗೆ ಇಷ್ಟ ಇಲ್ಲ, ಬೇರೆ ಕೆಲಸದ ನಿಮಿತ್ತ ನಗರಕ್ಕೆ ಬಂದಿದ್ದೇನೆ. ಆದರೆ, ವಿಮಾನ ನಿಲ್ದಾಣಕ್ಕೆ ಬಂದಾಗ ಪವಿತ್ರಾಗೌಡಗೆ ಜಾಮೀನು ಸಿಕ್ಕಿರುವ ವಿಚಾರ ಗೊತ್ತಾಯಿತು. ಈ ಸಮಯದಲ್ಲಿ ದೇವರೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ ಎಂದು ತಿಳಿಸಿದರು.
ಪವಿತ್ರಾಗೌಡಗೆ ಜಾಮೀನು ಸಿಕ್ಕಿ ಬಿಡುಗಡೆಯಾಗಿರುವುದಕ್ಕೆ ಸಂತೋಷವಾಗಿದೆ. ಅವರು ಹೊರಗೆ ಬರಲೆಂದು ಪ್ರತಿನಿತ್ಯ ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ. ಪವಿತ್ರಾಗೌಡ ಈ ಪ್ರಕರಣದಿಂದ ಶಾಶ್ವತವಾಗಿ ಹೊರಗೆ ಬರಲೆಂದು ದೇವರಿಗೆ ಹರಕೆ ಹೊತ್ತಿದ್ದೇನೆ. ಆ ಹರಕೆಯನ್ನು ಸಹ ತೀರಿಸುತ್ತೇನೆ. ಪವಿತ್ರಾಗೌಡ ಮತ್ತು ನಾನು ಪರಸ್ಪರ ಇಷ್ಟಪಟ್ಟು ಪ್ರೀತಿಸಿ ೨೦೦೭ರ ಜುಲೈನಲ್ಲಿ ಮದುವೆಯಾದವು. ಬಳಿಕ ೨೦೧೩ರಲ್ಲಿ ವಿಚ್ಛೇದನವಾಯಿತು. ಸಮಯ ಕೊಡಲು ಆಗದೆ, ಪರಸ್ಪರ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಹಾಗೂ ತಪ್ಪು ತಿಳುವಳಿಕೆಯಿಂದಾಗಿ ಇಬ್ಬರೂ ದೂರ ಆಗಿದ್ದೇವೆ. ಅದನ್ನು ಹೊರತುಪಡಿಸಿ ಬೇರೆ ಏನೂ ಕಾರಣವಿಲ್ಲ ಎಂದು ಹೇಳಿದರು.
ಪವಿತ್ರಾಗೌಡ ನನ್ನಿಂದ ದೂರ ಆಗಿರಬಹುದು. ಆದರೆ, ನಾನು ಅವರಿಂದ ದೂರ ಆಗಿಲ್ಲ. ಪವಿತ್ರಾಗೌಡರ ಜೀವನದಲ್ಲಿ ನಾನಿಲ್ಲ. ಆದರೆ, ನನ್ನ ಜೀವನದಲ್ಲಿ ಅವರು ಸದಾ ಇರುತ್ತಾರೆ. ಮಾಜಿ ಪತಿ ಎಂಬ ಶಬ್ಧ ಬೇಡ. ನಾನು ಅವರ ಪತಿ. ಅವರಿಗೆ ತೊಂದರೆ ಕೊಡಲು ಇಷ್ಟಪಡಲ್ಲ. ಎಲ್ಲೇ ಇರಲಿ ಅವರು ಚೆನ್ನಾಗಿ ಇರಲಿ ಎಂದು ಹಾರೈಸಿದರು.