

ಬೆಂಗಳೂರು: ಪರೀಕ್ಷೆ ನಿರ್ವಹಣೆಯಲ್ಲಿ ಕೆಪಿಎಸ್‌ಸಿ ಮತ್ತೊಮ್ಮೆ ವಿಫಲವಾಗಿದೆ. ಆಯೋಗದ ಆಡಳಿತ ವ್ಯವಸ್ಥೆ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯಂತ್ರಣ ಕಳೆದುಕೊಂಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಕರ್ನಾಟಕ ಕಾಂಗ್ರೆಸ್ ಪಕ್ಷವನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಹೊರ ಗುತ್ತಿಗೆ ನೀಡಿಲ್ಲವೆಂದಾದರೆ ರಾಹುಲ್‌ಗಾಂಧಿಯವರು ಕನ್ನಡಿಗರಿಗೆ ನ್ಯಾಯ ಕೊಡಿಸಲಿ ಎಂದು ಒತ್ತಾಯಿಸಿದ್ದಾರೆ.
ಕೆಪಿಎಸ್‌ಸಿ ಉದ್ಯೋಗಾಕಾಂಕ್ಷಿಗಳ ಪರವಾಗಿ ರಾಹುಲ್ ಗಾಂಧಿ ನಿಲ್ಲಬೇಕು. ಕೆಪಿಎಸ್‌ಸಿ ಪರೀಕ್ಷೆ ನಿರ್ವಹಣೆಯಲ್ಲಿ ಪದೇ ಪದೆ ಎಡುವುತ್ತಿರುವ ರಾಜ್ಯ ಸರ್ಕಾರಕ್ಕೆ ಬುದ್ಧಿವಾದ ಹೇಳಬೇಕು ಎಂದು ಕೋರಿದ್ದಾರೆ.
ಕೆಪಿಎಸ್‌ಸಿ ಆಡಳಿತ ವ್ಯವಸ್ಥೆ ಹುಳುಕುಗಳು ಪರೀಕ್ಷೆಗಳ ಮೇಲೆ ವ್ಯತಿರಿಕ್ತ ಪರಿಣಾಮಬೀರುತ್ತಿದ್ದು, ಉದ್ಯೋಗಾಕಾಂಕ್ಷಿಗಳು ಪದೇ ಪದೆ ನಿರಾಸೆ ಅನುಭವಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಕನ್ನಡಿಗರು, ಉದ್ಯೋಗಾಕಾಂಕ್ಷಿಗಳ ಬಗ್ಗೆ ನೈಜಿ ಕಾಳಜಿಯಿದ್ದರೆ ವ್ಯವಸ್ಥೆಯನ್ನು ಸರಿದಾರಿಗೆ ತರಲು ಗಮನಹರಿಸಬೇಕು ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.