

ಕರೊನಾ ಸೋಂಕಿನ ಹಾವಳಿ ಮತ್ತು ಅದನ್ನು ನಿಯಂತ್ರಿಸಲು ಘೋಷಿಸಲಾಗಿರುವ ಸಾಮಾಜಿಕ ದಿಗ್ಬಂಧನದಿಂದ ಸಾಲು-ಸಾಲು ಸವಾಲುಗಳು, ಸಮಸ್ಯೆಗಳು ಸೃಷ್ಟಿಯಾಗಿವೆ ಎಂಬುದು ಗೊತ್ತಿರುವಂಥದ್ದೇ. ಆದರೆ, ಕೆಡುಕಿನಲ್ಲಿಯೂ ಯಾವುದೋ ಒಂದು ಒಳಿತಿರುತ್ತದೆ, ಅದನ್ನು ನೋಡುವ ದೃಷ್ಟಿ ಬೇಕು ಎಂಬುದು ಭಾರತೀಯ ಸಂಸ್ಕೃತಿಯ ಸಾರ. ಮನುಷ್ಯನ ಒತ್ತಡದ ಜೀವನ, ಅನಾರೋಗ್ಯಕರ ಸ್ಪರ್ಧೆ, ‘ಬೇಕು’ಗಳ ಹೆಚ್ಚಳದ ನಡುವೆ ಪ್ರಕೃತಿಯ ಶೋಷಣೆ, ಅದರ ಮೇಲಾಗುತ್ತಿರುವ ಆಘಾತ ಗಮನಕ್ಕೆ ಬಂದರೂ, ಅದನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಮಾನವನ ಅತಿಯಾದ ಚಟುವಟಿಕೆಗಳಿಗೆ ಕೊಂಚ ಕಡಿವಾಣ ಹಾಕಿದರೂ, ಪ್ರಕೃತಿ ಹೇಗೆ ಚೇತರಿಸಿಕೊಳ್ಳುತ್ತದೆ ಎಂಬುದಕ್ಕೆ ಲಾಕ್ಡೌನ್ ಅವಧಿಯೇ ಜ್ವಲಂತ ನಿದರ್ಶನ. ನದಿಗಳ ಒಡಲಿಗೆ ಕೈಗಾರಿಕೆಗಳ ತ್ಯಾಜ್ಯ ಸೇರುತ್ತಿಲ್ಲವಾದ್ದರಿಂದ, ನೀರು ಶುದ್ಧವಾಗುತ್ತಿದೆ. ಗಂಗಾ, ಯಮುನಾ ನದಿಗಳ ನೀರು ಕುಡಿಯಲು ಯೋಗ್ಯವಾಗಿದೆ. ಅಷ್ಟೇ ಅಲ್ಲ, ಇತ್ತೀಚೆಗೆ ಬಂದ ವರದಿಯೊಂದು ಇನ್ನಷ್ಟು ಸಮಾಧಾನ ಮೂಡಿಸಿದೆ. ಕಳೆದ ಎರಡು ದಶಕದಲ್ಲೇ ಉತ್ತರ ಭಾರತ ಅತ್ಯಂತ ಕಡಿಮೆ ವಾಯುಮಾಲಿನ್ಯವನ್ನು ಕಂಡಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ತಿಳಿಸಿದೆ.
ಕಳೆದ 20 ವರ್ಷಗಳಲ್ಲೇ ‘ಏರೋಸಾಲ್’ಗಳ ಮಟ್ಟದಲ್ಲಿ ತೀವ್ರ ಕುಸಿತ ಕಂಡಿದೆ. ಏರೋಸಾಲ್ ಕಣಗಳು ವಸ್ತುಗಳು ಸ್ಪಷ್ಟವಾಗಿ ಗೋಚರಿಸದಂಥ ವಾತಾವರಣಕ್ಕೆ ಕಾರಣವಾಗುತ್ತವೆ. ಇವುಗಳ ಪ್ರಮಾಣದಲ್ಲಿ ಕುಸಿತ ಆಗಿರುವುದರಿಂದ ವಾಯುಮಾಲಿನ್ಯ ತಗ್ಗಿದೆ. ‘ಲಾಕ್ಡೌನ್ನಿಂದ ಮಾಲಿನ್ಯ ಕಡಿಮೆ ಆಗಬಹುದು ಎಂದೆನಿಸಿತ್ತು. ಆದರೆ, ವಾತಾವರಣದಲ್ಲಿ ಇಷ್ಟೊಂದು ಬದಲಾವಣೆ ಊಹಿಸಿರಲಿಲ್ಲ’ ಎಂದು ನಾಸಾ ಪ್ರತಿಕ್ರಿಯಿಸಿದೆ. ಕೆಲ ತಿಂಗಳುಗಳ ಹಿಂದೆಯಷ್ಟೇ ದೆಹಲಿ ವಾಯುಮಾಲಿನ್ಯ ತೊಂದರೆಗೆ ಸಿಲುಕಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಲಾಕ್ಡೌನ್ ಮುಗಿದ ಬಳಿಕ ಜನಜೀವನ ಸಹಜಸ್ಥಿತಿಗೆ ಬರಲಿದೆ. ಕೈಗಾರಿಕೆ ಸೇರಿ ಎಲ್ಲ ಚಟುವಟಿಕೆಗಳು ಆರಂಭಗೊಳ್ಳುತ್ತವೆ. ಹಾಗಾದರೆ, ಮಾಲಿನ್ಯ ಮತ್ತೆ ಹಳೆಯ ಸ್ಥಿತಿಗೆ ತಲುಪುತ್ತದೆಯೇ ಎಂಬ ಪ್ರಶ್ನೆ ಈ ಹೊತ್ತಲ್ಲಿ ಕಾಡುತ್ತಿದೆ. ಆರ್ಥಿಕ ಚಟುವಟಿಕೆಗಳು, ಅದಕ್ಕಾಗಿ ಕೈಗಾರಿಕೆಗಳು ಜನಜೀವನಕ್ಕೆ ಅನಿವಾರ್ಯವೇ ಆಗಿರುವುದರಿಂದ, ಮುಂದಿನ ಸ್ಥಿತಿ ಹೇಗಿರಲಿದೆ ಎಂದು ಊಹಿಸಬಹುದು. ಆದರೆ, ದಿಗ್ಬಂಧನದ ಅವಧಿ ಪರಿಸರದ ಬಗ್ಗೆ ಅರಿವು ಮೂಡುವಂತೆ ಮತ್ತು ಅದರ ಜತೆ ಮತ್ತಷ್ಟು ನಿಕಟ ಆಗುವಂತೆ ಮಾಡಿದೆ. ಈ ಅರಿವು ಭವಿಷ್ಯಕ್ಕೆ ದಿಕ್ಸೂಚಿಯಾಗಬೇಕು. ಅಂದರೆ, ನಮ್ಮ ಮನಸ್ಥಿತಿ ಬದಲಾಗಬೇಕು. ಪ್ರಕೃತಿ ಉಳಿದರೆ ನಾವು ಎಂಬ ಅರಿವು ಗಟ್ಟಿ ಆಗಬೇಕು. ಅಭಿವೃದ್ಧಿ ಬೇಕು ಎಂಬುದು ನಿಜ. ಆದರೆ, ಅದು ಸಮತೋಲಿತವಾಗಿರಬೇಕು. ಪರಿಸರವನ್ನು ತೀರಾ ಹಾಳುಗೆಡವಿ ಸಾಧಿಸುವ ಅಭಿವೃದ್ಧಿಯು ಮನುಷ್ಯನಿಗೇ ಮಾರಕ ಎಂಬುದಕ್ಕೆ ಹಲವು ನಿದರ್ಶನಗಳನ್ನು ನೋಡುತ್ತಿದ್ದೇವೆ. ವೈಯಕ್ತಿಕ ಮತ್ತು ಸಾಮೂಹಿಕವಾಗಿ ನಮ್ಮಿಂದ ಪರಿಸರಕ್ಕೆ ಅತ್ಯಂತ ಕಡಿಮೆ ಹಾನಿ ಆಗುವಂತೆ ನೋಡಿಕೊಳ್ಳಬೇಕಿದೆ. ಜೀವನಶೈಲಿಯಲ್ಲೂ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡು, ಅದನ್ನು ನಿಸರ್ಗಸ್ನೇಹಿ ಆಗಿಸಬೇಕಿದೆ. ಹಾಗಾದರೆ, ಪರಿಸರವೂ ಸಂತೃಪ್ತಿಯಿಂದ ನಲಿಯುತ್ತದೆ, ಮನುಕುಲವೂ ಉಳಿಯುತ್ತದೆ. ಕರೊನಾ ಕಲಿಸಿದ ಈ ಪಾಠ ನಮ್ಮ ನಾಳೆಗಳನ್ನು ಸಾರ್ಥಕವಾಗಿ ರೂಪಿಸಲಿ.