ಪರಿಸರ ಸೂಕ್ಷ್ಮ ವಲಯಕ್ಕೂ ಕಸ!

Published on

* ನಿಯಮ ಉಲ್ಲಂಘನೆ

* ರಾಮದೇವರ ಬೆಟ್ಟದ ರಣಹದ್ದು ವನ್ಯ ಜೀವಿಧಾಮ ವ್ಯಾಪ್ತಿಯಲ್ಲಿ ವಿಲೇವಾರಿ

* ಸ್ಥಳೀಯರ ಆಕ್ರೋಶ

ಗಂಗಾಧರ್ ಬೈರಾಪಟ್ಟಣ ರಾಮನಗರ

ನಗರದ ಕಸಕ್ಕೆ ಮುಕ್ತಿ ನೀಡುವ ಸಮಸ್ಯೆಯಲ್ಲಿ ಸಿಲುಕಿರುವ ನಗರಸಭೆ , ಈಗ ಪರಿಸರ ಸೂಕ್ಷ್ಮ ವಲಯಕ್ಕೂ ಕಸವನ್ನು ಹಾಕುವ ಮೂಲಕ ನಿಯಮ ಉಲ್ಲಂಘನೆ ಮಾಡಿದೆ.

ದಿನದಿಂದ ದಿನಕ್ಕೆ ರಾಮನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ವ್ಯಾಪಕವಾಗುತ್ತಲೇ ಇದೆ. ನಗರಸಭೆ  ಎಲ್ಲ ಮಾರ್ಗಗಳ ಮೂಲಕ ಈ ಸಮಸ್ಯೆಗೆ ಮುಕ್ತಿ ನೀಡುವ ಪ್ರಯತ್ನದಲ್ಲಿದೆ. ಇದಕ್ಕಾಗಿ ಕೆಲವು ಕಡೆಗಳಲ್ಲಿ ನೆಲಭರ್ತಿ ಮಾಡುವ ಮೂಲಕ ಕಸ ವಿಲೇವಾರಿ ಮಾಡಿದೆ. ಈಗ ಮತ್ತೆ ಜಾಗದ ಕೊರತೆ ಎದುರಾದ ಹಿನ್ನೆಲೆಯಲ್ಲಿ ರಾಮನಗರದ ರಾಮದೇವರ ಬೆಟ್ಟದ ರಣಹದ್ದು ವನ್ಯ ಜೀವಿಧಾಮ ವ್ಯಾಪ್ತಿಯ ಪರಿಸರ ಸೂಕ್ಷ್ಮ ಪ್ರದೇಶದ ಜಮೀನೊಂದರಲ್ಲಿ ಕಸ ವಿಲೇವಾರಿ ಮಾಡುತ್ತಿದ್ದು, ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿ ಕಸ ಹಾಕವಂತಿಲ್ಲ:

ನಗರದ ಕೂಗಳತೆ ದೂರದಲ್ಲಿಯೇ ಇರುವ ಪಾಲಭೋವಿ ದೊಡ್ಡಿಯಲ್ಲಿ ಕಸವನ್ನು ಕಳೆದ 15 ದಿನಗಳಿಂದಲೂ ಸುರಿಯಲಾಗುತ್ತಿದೆ. ಇದರಿಂದ ಸ್ಥಳೀಯವಾಗಿ ಕೆಟ್ಟ ವಾಸನೆ ಹೆಚ್ಚಿದೆ. ಅಲ್ಲದೆ, ಈ ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಸೇರಿರುವ ಕಾರಣ ಇಲ್ಲಿ ಕಸ ವಿಲೇವಾರಿ ಮಾಡುವಂತಿಲ್ಲ.

ಮತ್ತೊಂದಡೆ ರಾಮದೇವರ ಬೆಟ್ಟ ಉದ್ದ ಕೊಕ್ಕಿನ ರಣಹದ್ದುಗಳ ವಾಸಸ್ಥಾನವಾಗಿದ್ದು, ಈಗಾಗಲೇ ಇವು ಅತಿ ಅಳಿವಿನಂಚಿನಲ್ಲಿರುವ ಪ್ರಭೇದಕ್ಕೆ ಸೇರಿರುವ ಕಾರಣ ಒಂದು ದಶಕದ ಹಿಂದೆಯೇ ವನ್ಯ ಜೀವಿಧಾಮವನ್ನು ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರ, ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ. ಈ ಪ್ರದೇಶದಲ್ಲಿ ರಣಹದ್ದುಗಳಿಗೆ ಮಾರಕವಾಗುವ ಯಾವುದೇ ಚಟುವಟಿಕೆ ಮಾಡುವಂತಿಲ್ಲ. ಇದನ್ನು ಉಲ್ಲಂಘನೆ ಮಾಡಿದರೆ, ಅಂತಹ ವ್ಯಕ್ತಿ ಮತ್ತು ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅವಕಾಶ ಅರಣ್ಯ ಇಲಾಖೆಗೆ ಇದೆ.

ಅರಣ್ಯ ಇಲಾಖೆ ನೋಟಿಸ್:

ಇಎಸ್‌ಜಡ್ ಪ್ರದೇಶದಲ್ಲಿ ಕಸ ವಿಲೇವಾರಿ ಮಾಡುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆ ಸ್ಥಳೀಯ ಪರಿಶೀಲನೆ ನಡೆಸಿದ ರಾಮನಗರ ಪ್ರಾದೇಶಿಕ ಅರಣ್ಯ ವಲಯದ ಅಧಿಕಾರಿಗಳು ಕಸವನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿದ್ದಾರೆ. ಅಲ್ಲದೆ, ಯಾವ ಕಾರಣಕ್ಕೆ ಸ್ಥಳದಲ್ಲಿ ಕಸ ವಿಲೇವಾರಿ ಮಾಡಬಾರದು ಎನ್ನುವ ನಿರ್ದೇಶನ ನೀಡಿದ್ದಾರೆ.

ಎಲ್ಲವನ್ನೂ ಸರಿಪಡಿಸುತ್ತಿದ್ದೇವೆ?

ಮತ್ತೊಂದೆಡೆ ಅರಣ್ಯ ಇಲಾಖೆಯಿಂದ ನೋಟಿಸ್ ಪಡೆದಿರುವುದನ್ನು ಒಪ್ಪಿಕೊಳ್ಳುವ ನಗರಸಭೆ  ಅಧಿಕಾರಿಗಳು, ಕಸ ವಿಲೇವಾರಿಗೆ ಜಾಗದ ಕೊರತೆ ಕಾರಣ ಅಲ್ಲಿ, ಕಸ ಹಾಕಲಾಗಿದೆ ಎನ್ನುವ ಸಮಜಾಯಿಷಿ ನೀಡುತ್ತಾರೆ. ಆದರೆ, ನೋಟಿಸ್ ನಂತರ ಕಸ ವಿಲೇವಾರಿಗೆ ಬದಲಿ ವ್ಯವಸ್ಥೆ ಮಾಡಿಕೊಂಡಿದ್ದು, ಈಗಾಗಲೇ ಕಸ ಹಾಕಿರುವ ಜಾಗವನ್ನು ಪರಿಸರಕ್ಕೆ ಮಾರಕವಾಗದಂತೆ ಸರಿಪಡಿಸುವ ಕೆಲಸ ಮಾಡಲಾಗುವುದು ಎನ್ನುವ ಭರವಸೆ ನೀಡಿದ್ದಾರೆ.

ವೈಜ್ಞಾನಿಕ ಕ್ರಮ ಆಗಲಿ

ರಾಮನಗರದಲ್ಲಿ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿದ್ದು, ಇದರ ವ್ಯಾಪ್ತಿ ಹೆಚ್ಚುತ್ತಲೇ ಇದೆ. ನೆಲ ಭರ್ತಿ ಯೋಜನೆ ಕಸ ವಿಲೇವಾರಿಗೆ ಸಮಸ್ಯೆಗೆ ಪರಿಹಾರವನ್ನು ಸಾಧ್ಯವಾದಷ್ಟು ವೈಜ್ಞಾನಿಕ ಕ್ರಮಗಳ ಮೂಲಕವೇ ಕೈಗೊಳ್ಳಬೇಕಿದೆ. ಇಲ್ಲವಾದರೆ ಒಂದು ಸಮಸ್ಯೆ ಪರಿಹಾರದಿಂದ ಮತ್ತಷ್ಟು ಸಮಸ್ಯೆಗಳು ಸೃಷ್ಟಿ ಆಗಲಿವೆ.

ರಣಹದ್ದು ವನ್ಯ ಜೀವಿಧಾಮದ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಹೊಂದಿಕೊಂಡ ಜಮೀನೊಂದರಲ್ಲಿ ಕಸ ಹಾಕುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇದನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿದ್ದೇವೆ. ಒಂದು ವೇಳೆ ತೆರವು ಮಾಡದಿದ್ದರೆ, ಮೇಲ್ವಿಚರಣಾ ಸಮಿತಿ ಗಮನಕ್ಕೆ ತಂದು ಕಾನೂನು ಕ್ರಮ ಕೈಗೊಳ್ಳಲಾಗುವುದು.

ಮನ್ಸೂರ್ ಅಹಮದ್, ಆರ್‌ಎಪ್ಒ, ರಾಮನಗರ ಪ್ರಾದೇಶಿಕ ವಲಯ

ಜಾಗದ ಕೊರತೆಯಿಂದಾಗಿ ಕಸ ವಿಲೇವಾರಿ ಮಾಡಲಾಗಿತ್ತು. ಕಸ ವಿಲೇವಾರಿಗೆ ಬೇರೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಹಾಕಿರುವ ಕಸವನ್ನು ಪರಿಸರಕ್ಕೆ ತೊಂದರೆ ಆಗದಂತೆ ವಿಲೇ ಮಾಡಲಾಗುವುದು.

ಡಾ.ಜಯಣ್ಣ, ಆಯುಕ್ತರು, ನಗರಸಭೆ ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net