

ಹನಗೋಡು: ಹನಗೋಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹನಗೋಡು ರೋಟರಿ ಸಂಸ್ಥೆಯ ಸಹಭಾಗಿತ್ವದಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಬುಧವಾರ ಆಯೋಜಿಸಲಾಗಿತ್ತು.
ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯ ಕಿರಂಗೂರು ಬಸವರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ಕಾರ ಅರಣ್ಯ ಇಲಾಖೆ ಮೂಲಕ ವಿದ್ಯಾರ್ಥಿಗಳು, ಸಾರ್ವಜನಿಕರಲ್ಲಿ ಪರಿಸರ ಹಾಗೂ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರಕೃತಿ ನಾಶದಿಂದ ತಾಪಮಾನದ ವೈಪರೀತ್ಯ ಉಂಟಾಗಿದೆ. ಪರಿಸರವನ್ನು ಸಮತೋಲನದಲ್ಲಿರುವಂತೆ ಕಾಪಾಡಿಕೊಳ್ಳಲು ಜಮೀನು ಹಾಗೂ ರಸ್ತೆ ಬದಿ, ಕೆರೆ ಕಟ್ಟೆಗಳ ಏರಿ ಬದುಗಳಲ್ಲಿ ಹೆಚ್ಚು ಗಿಡ ಮರಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು. ಬಳಿಕ ಕಾಲೇಜು ಆವರಣದಲ್ಲಿ ಸಮಿತಿ ಸದಸ್ಯರೊಂದಿಗೆ ಗಿಡ ನೆಟ್ಟು ನೀರು ಹಾಕಿದರು.
ನಂತರ ಕಾಲೇಜು ವಿದ್ಯಾರ್ಥಿಗಳು ಹನಗೋಡಿನ ಪ್ರಮುಖ ಬೀದಿಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಥಾ ನಡೆಸಿದರು.
ಪ್ರಾಂಶುಪಾಲ ಡಾ.ಬಸವರಾಜ್, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾದ ಎಚ್ ಎಸ್.ವೆಂಕಟಪ್ಪ , ಎಚ್.ಆರ್. ರಮೇಶ್, ಅಂಗಡಿ ರಾಮಚಂದ್ರು, ಕೆ.ಎಸ್.ರಾಘವೇಂದ್ರ, ಸಂದೀಪ್, ರೋಟರಿ ಸಂಸ್ಥೆ ಕಾರ್ಯದರ್ಶಿ ಅಬ್ಬೂರು ಕುಮಾರ್ ಇತರರು ಇದ್ದರು.