

ಮೂಡಿಗೆರೆ: ಕಾಡು ನಾಶವಾದರೆ ವನ್ಯ ಪ್ರಾಣಿಗಳು ನಾಡಿಗೆ ಪ್ರವೇಶಿಸಿ ಜೀವ ಹಾನಿ ಮಾಡುವ ಜತೆಗೆ ರೈತರ ಬೆಳೆ ಧ್ವಂಸಗೊಳಿಸುತ್ತವೆ. ನಾಡು ಕಟ್ಟಿದಂತೆ ಕಾಡನ್ನೂ ಬೆಳೆಸಬೇಕಾಗಿದೆ ಎಂದು ಪಪಂ ಉಪಾಧ್ಯಕ್ಷ ಹೊಸಕೆರೆ ರಮೇಶ್ ಹೇಳಿದರು.
ಹಸಿರು ಫೌಂಡೇಶನ್‌ನಿಂದ ದೇವರಮನೆ ಗ್ರಾಮದ ಪ್ರವಾಸಿ ತಾಣದಲ್ಲಿ ಸೋಮವಾರ ಒಂದು ಲಕ್ಷ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆರಳೆಣಿಕೆಯಷ್ಟು ಜನರು ಕಾಡನ್ನು ಬೆಳೆಸಿ ವನ್ಯಜೀವಿ ರಕ್ಷಿಸುತ್ತಿದ್ದಾರೆ. ತೋರಿಕೆಗೆ ಮಾತ್ರ ವನ ಮಹೋತ್ಸವ ಆಚರಿಸುವುದರಿಂದ ಯಾವುದೇ ಪ್ರಯೋಜನವಾಗದು. ನೆಟ್ಟ ಗಿಡಗಳು ಮರವಾಗುವವರೆಗೆ ಪೋಷಿಸಬೇಕು ಎಂದರು.
ಹಸಿರು ಫೌಂಡೇಶನ್ ಅಧ್ಯಕ್ಷ ರತನ್ ಊರುಬಗೆ ಮಾತನಾಡಿ, ಸಂಸ್ಥೆಯಿಂದ ಪ್ರತಿ ವರ್ಷ ಒಂದು ಲಕ್ಷ ಗಿಡಗಳನ್ನು ನೆಟ್ಟು ಪಾಲನೆ ಮಾಡುವ ಯೋಜನೆ ರೂಪಿಸಲಾಗಿದೆ. ಪ್ಲಾಸ್ಟಿಕ್‌ನಿಂದ ಪರಿಸರ ಹಾಳಾಗುತ್ತದೆ. ಪ್ಲಾಸ್ಟಿಕ್ ತಡೆಗಟ್ಟಲು ಆಯಾ ವ್ಯಾಪ್ತಿಯ ಸ್ಥಳೀಯಾಡಳಿತ ಸಂಸ್ಥೆಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ತ್ರಿಪುರ ಗ್ರಾಪಂ ಉಪಾಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ, ಪ್ರಕೃತಿಯಲ್ಲಿ ಮಾನವನಿಗೆ ಮಾತ್ರ ಪಾಲು ಎಂಬ ಧೋರಣೆಯಿಂದಾಗಿ ಪರಿಸರ ನಾಶವಾಗುತ್ತಿದೆ ಎಂದು ಹೇಳಿದರು.
ದೇವರಮನೆ ಕಾಲಭೈರವೇಶ್ವರ ದೇವಸ್ಥಾನ ಸಮಿತಿ ಸದಸ್ಯರಾದ ಹಳ್ಳಿಬೈಲ್ ಗಿರೀಶ್, ಮದನ್ ಹೆಗಡೆ, ತಾಲೂಕು ಹೋಂಸ್ಟೇ ಮತ್ತು ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ಜಗದೀಶ್ ಗೌಡ, ಚಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಮಂಜುನಾಥ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ.ಆರ್.ನವೀನ್, ಕೆಡಿಪಿ ಸದಸ್ಯರಾದ ಸುರೇಂದ್ರ, ಕುನ್ನಳ್ಳಿ ರವಿ, ಹಸಿರು ಫೌಂಡೇಶನ್ ಪದಾಧಿಕಾರಿಗಳಾದ ವಿನುಪ್ರಸಾದ್, ಅಭಿಜಿತ್ ಹೆಡದಾಳು, ಸುನಿಲ್, ಆದೀಫ್, ಸುಮಂತ್, ಪ್ರದೀಪ್, ಪೂರ್ಣೇಶ್, ಶೋಧನ್, ಸಮರ್ಥ್ ಇತರರಿದ್ದರು.