

ಸತತ ಪರಿಶ್ರಮದಿಂದ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ದೊರೆಯುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದ ಸಭಾಂಗಣದಲ್ಲಿ ಗುರುವಾರ ಮೈಸೂರು ವಿಶ್ವವಿದ್ಯಾಲಯ ಹಾಗೂ ಹಿರಿಯ ವಿದ್ಯಾರ್ಥಿಗಳ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ವಿಷಯ ಕುರಿತು ಆಯೋಜಿಸಿದ್ದ ಉಚಿತ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬೇಕು, ಉನ್ನತ ಶ್ರೇಣಿಯನ್ನು ಪಡೆದು ಅಂದುಕೊಂಡಿದ್ದನ್ನು ಸಾಧಿಸಬೇಕು ಎನ್ನುವುದು ಎಲ್ಲ ವಿದ್ಯಾರ್ಥಿಗಳ ಆಸೆಯಾಗಿರುತ್ತದೆ. ಅದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುವ ಕ್ರಮ ಬಹಳ ಮುಖ್ಯವಾಗಿರುತ್ತದೆ ಎಂದರು.
ಸಹಾಯಕ ಪೊಲೀಸ್ ಆಯುಕ್ತ ಪಿ.ರವಿಪ್ರಸಾದ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಮಹತ್ವ ಕಡಿಮೆಯಾಗುತ್ತಿದೆ. ಕೇಂದ್ರ ಸರ್ಕಾರದಲ್ಲಿ ಒಂದೂವರೆ ಕೋಟಿ ಹುದ್ದೆಗಳಿವೆ. ಆದರೆ, ಕರ್ನಾಟಕದ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಹುದ್ದೆಗಳಿಗೆ ಆಸಕ್ತಿ ತೋರುತ್ತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವೆ ಎಂ.ಕೆ. ಸವಿತಾ, ಈಶ್ವರ್ ಗಿರಿ ಪಾಠಶಾಲೆಯ ಮುಖ್ಯಸ್ಥ ಬಿ.ಇ.ಈಶ್ವರ್ ಗಿರಿ, ಪ್ರಿಯಾಂಕಾ ಪತ್ತಾರ್ ಇತರರಿದ್ದರು.