

ಹುಣಸೂರು: ಪರಿಶಿಷ್ಟ ಜಾತಿ ಮತ್ತು ಪಂಗಡವರಿಗೆ ಎಸ್‌ಸಿಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ 2023-24ನೇ ಸಾಲಿನ ಆಯವ್ಯಯದಲ್ಲಿ ಮೀಸಲಾಗಿರಿಸುವ ಹಣದಲ್ಲಿ 11 ಸಾವಿರ ಕೋಟಿ ರೂ.ಗಳನ್ನು ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಬಳಸಿಕೊಳ್ಳಲು ತೀರ್ಮಾನಿಸಿ ರುವುದು ಖಂಡನೀಯ ಎಂದು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು ಟೀಕಿಸಿದ್ದಾರೆ.
ಈ ಬಾರಿಯ ಬಜೆಟ್‌ನಲ್ಲಿ ಎಸ್‌ಸಿಸಿಪಿ ಮತ್ತು ಟಿಎಸ್‌ಪಿ ಯೋಜನೆಗಳಿಗಾಗಿ 34,293 ಕೋಟಿ ರೂ.ಗಳ ಕ್ರಿಯಾಯೋಜನೆಯನ್ನು ಸರ್ಕಾರ ಮಂಡಿಸಿದ್ದು, ಇದೀಗ ಈ ಪೈಕಿ 11 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದು ಕಾನೂನುಬಾಹಿರ ಕ್ರಮ. ಪರಿಶಿಷ್ಟ ಜಾತಿ/ಪಂಗಡಗಳ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಇತರ ಯೋಜನೆಗಳಿಗೆ ಬಳಸಿಕೊಳ್ಳುವಂತ್ತಿಲ್ಲ. ಹೀಗಿದ್ದೂ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ. ಕೂಡಲೇ ಸರ್ಕಾರದ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಗ್ಯಾರಂಟಿ ಯೋಜನೆ ಜಾರಿಗಾಗಿ ಬೇರೆ ಸಂಪನ್ಮೂಲಗಳನ್ನು ಕ್ರೋಡೀಕರಿಸಬೇಕೆಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.