

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಯುಪಿಎಸ್ಸಿ ಸೇರಿ ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆೆಗಳಿಗಾಗಿ ದೆಹಲಿಯಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಉತ್ತಮ ಹಾಸ್ಟೆಲ್ ಜತೆಗೆ ಹೈಟೆಕ್ ಗ್ರಂಥಾಲಯ ಸ್ಥಾಪನೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಪರಿಷತ್ ಸಭೆಯಲ್ಲಿ ಇಲಾಖಾವಾರು ಹಂಚಿಕೆ ಕುರಿತು ಅವಲೋಕನ ನಡೆಸಿ ಒಪ್ಪಿಗೆ ನೀಡಲಾಗಿದೆ.
ಪ್ರಸ್ತುತ ದೆಹಲಿಯಲ್ಲಿ ರಾಜ್ಯದ 70 ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು ಯುಪಿಎಸ್ಸಿಗೆ ತಯಾರಿ ನಡೆಸುತ್ತಿದ್ದು ಅವರಿಗೆ ನೀಡುವ ಮಾಸಿಕ ಭತ್ಯೆ 10 ಸಾವಿರ ರೂ. ಕಡಿಮೆ ಎಂಬ ಕೂಗಿದೆ. ಹೀಗಾಗಿ ತಕ್ಷಣದಿಂದಲೇ ತಲಾ 15 ಸಾವಿರ ರೂ.ಗೆ. ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗುತ್ತದೆ. ಯಾವ ಹೋಬಳಿಗಳಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಇಲ್ಲವೋ ಅಲ್ಲಿ ತಕ್ಷಣವೇ ಶಾಲೆ ಆರಂಭಿಸಲೇಬೇಕು. ಆಯಾ ಹೋಬಳಿಯ ವಿದ್ಯಾರ್ಥಿಗಳಿಗೆ ಶೇ. 75ರಷ್ಟು ಸೀಟು ನೀಡಬೇಕು. ಎಸ್ಸಿ, ಎಸ್ಟಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಕೊಡುವ ಪ್ರಸ್ತಾವನೆ ಇದೆ ಎಂದು ಸಿಎಂ ಹೇಳಿದರು. ಜನಸಂಖ್ಯೆ ಆಧಾರಿತವಾಗಿ ಅನುದಾನ ಹಂಚಿಕೆ ಮಾಡುವ ಕಾನೂನು ಜಾರಿಯಾಗಿ ಹತ್ತು ವರ್ಷ ಕಳೆದಿದೆ. ಪ್ರಸ್ತುತ ರ್ಯಾಂಡಮ್ ಸರ್ವೆಯಲ್ಲಿ ಶೇ.65 ಮಂದಿಗೆ ಅನುಕೂಲವಾಗಿದೆ ಎಂಬ ಮಾಹಿತಿ ಇದೆ.
ಕಳೆದ 10 ವರ್ಷದಲ್ಲಿ ಈ ಯೋಜನೆಯಿಂದ ಸಮುದಾಯದ ಮೇಲೆ ಬೀರಿರುವ ಪರಿಣಾಮ, ಸಮುದಾಯಕ್ಕೆ ಯೋಜನೆ ತಲುಪಿರುವ ಪ್ರಮಾಣದ ಬಗ್ಗೆ ಹಾಗೂ ಅವರ ಆರ್ಥಿಕ ಸ್ಥಿತಿ ಪ್ರಗತಿ ಆಗಿರುವ ಬಗ್ಗೆ ಮೌಲ್ಯಮಾಪನ ಮಾಡಲಾಗುವುದು. ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗುವುದು. ಕಾಯ್ದೆಯಲ್ಲಿದ್ದ 7ಡಿ ರದ್ದು ಮಾಡಿದ ರೀತಿಯಲ್ಲೇ 7ಸಿ ಕೂಡ ರದ್ದು ಮಾಡಬೇಕು ಎಂದು ಶಾಸಕ ನರೇಂದ್ರಸ್ವಾಮಿ ಸಲಹೆ ನೀಡಿದ್ದಾರೆ. ಈ ಸಲಹೆಯ ಸಾಧಕ ಬಾಧಕಗಳನ್ನು ಪರಿಶೀಲಿಸಲಾಗುವುದು ಎಂದು ಸಿಎಂ ತಿಳಿಸಿದರು.
ಗ್ಯಾರಂಟಿಗೆ -ಠಿ;14 ಸಾವಿರ ಕೋಟಿ ಬಳಕೆ: ಪರಿಶಿಷ್ಟ ಜಾತಿ, ಪಂಗಡದ ಉಪ ಯೋಜನೆಗೆ ಮೀಸಲಾದ ಹಣವನ್ನು ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ, ಅನ್ನಭಾಗ್ಯ ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳಲಿದೆ. ಈ ಮೂಲಕ ಗ್ಯಾರಂಟಿ ಯೋಜನೆಗಳಿಗೆ 14 ಸಾವಿರ ರೂ.ನಷ್ಟು ಸೇರಿ ಒಟ್ಟಾರೆ 16 ಸಾವಿರ ಕೋಟಿ ರೂ.ನಷ್ಟು ಬಳಸಲು ಒಪ್ಪಿಗೆ ಕೊಡಲಾಗಿದೆ. ಗ್ಯಾರಂಟಿ ಹಾಗೂ ಇತರೆ ಯೋಜನೆಗಳಲ್ಲಿ ಎಸ್ಸಿ, ಎಸ್ಟಿ ಫಲಾನುಭವಿಗಳ ಸಂಖ್ಯೆ ಪ್ರಸ್ತಾಪಿಸಿ ಆ ಪ್ರಕಾರ ಅನುದಾನವನ್ನು ಬಳಕೆ ಮಾಡಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.
ಎಸ್ಸಿ, ಎಸ್ಪಿ ಮತ್ತು ಟಿಎಸ್ಪಿ ಹಣ ಆಯಾ ವರ್ಷವೇ ಶೇ. 100ರಷ್ಟು ಖರ್ಚು ಮಾಡಬೇಕು ಎನ್ನುವ ಕಾನೂನು ಮಾಡಿದ್ದು ನಾವೇ. ಖರ್ಚು ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎನ್ನುವ ನಿಯಮವನ್ನೂ ಮಾಡಿದ್ದೇವೆ. ಯಾರು ನಿರ್ಲಕ್ಷ್ಯ ಮಾಡಿದ್ದಾರೋ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನಿರ್ಲಕ್ಷ್ಯಕ್ಕೆ ಕ್ಷಮೆ ಇಲ್ಲ.
| ಸಿದ್ದರಾಮಯ್ಯ ಮುಖ್ಯಮಂತ್ರಿ