

ಆನವಟ್ಟಿ; ರಾಜ್ಯದಲ್ಲಿ 25ರಿಂದ 30 ಲಕ್ಷ ಜನಸಂಖ್ಯೆ ಹೊಂದಿರುವ ಜೋಗಿ ಜನಾಂಗದವರು ಆರ್ಥಿಕವಾಗಿ ದುರ್ಬಲರಾಗಿದ್ದು ಸರ್ಕಾರ ಜೋಗಿ ಜನಾಂಗದ ಎಲ್ಲ ಪಂಗಡವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಅಖಿಲ ಕರ್ನಾಟಕ ಜೋಗಿ ಸಮಾಜ ಅಭಿವೃದ್ಧಿ ಮಹಾಮಂಡಳಿ ಅಧ್ಯಕ್ಷ ಶಿವಾಜಿ ಡಿ.ಮಧುರ್‌ಕರ್ ಒತ್ತಾಯಿಸಿದರು.
ಅಖಿಲ ಕರ್ನಾಟಕ ಜೋಗಿ ಸಮಾಜ ಅಭಿವೃದ್ಧಿ ಮಹಾಮಂಡಳಿ ಆಶ್ರಯದಲ್ಲಿ ಸೆ.24 ರಂದು ಹಮ್ಮಿಕೊಂಡಿರುವ ನೂತನ ಸಚಿವರು, ಶಾಸಕರು ಹಾಗೂ ಸಂಸದರಿಗೆ ಸನ್ಮಾನ ಸಮಾರಂಭದ ಅಂಗವಾಗಿ ಪಟ್ಟಣದಲ್ಲಿ ಭಾನುವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜೋಗಿ ಜನಾಂಗದ ಹಲವರು ಜೀವನ ನಿರ್ವಹಣೆಗಾಗಿ ಭಿಕ್ಷಾಟನೆ, ಕೂಲಿ ಮಾಡುತ್ತಾ ಅಲೆಮಾರಿ ಜೀವನ ನಡೆಸುತ್ತಿದ್ದಾರೆ. ಮಹಿಳೆಯರು ಸಣ್ಣ ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ರಾಜ್ಯದಲ್ಲಿ ಜೋಗಿ, ಜೋಗೇರ, ಕಿನ್ನರಿಜೋಗಿ, ಬಳೆಗಾರ ಜೋಗಿ, ರಾವಳ್ಳ ಜೋಗಿ, ಕಪಾಲಿ, ಬ್ರಹ್ಮಕಪಾಲಿ ಮುಂತಾದ ಎಲ್ಲ ಜೋಗಿ ಒಳಪಂಗಡಗಳು ಒಂದೇ ಆಗಿದೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಹಿಂದೆ ಉಳಿದಿದ್ದು ಸಮಾಜದ ಏಳಿಗೆಗಾಗಿ ಎಲ್ಲ ಪಂಗಡಗಳು ಸಂಘಟನೆಗೊಳ್ಳಬೇಕು ಎಂದು ಹೇಳಿದರು.
ಮಂಡಳಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಪರ್‌ಬಳ್ಕರ್ ಮಾತನಾಡಿ, ಡಾ. ಶ್ರೀನಿವಾಸ ಗೌಡ ನೇತೃತ್ವದ ಕುಲಶಾಸೀಯ ಅಧ್ಯಯನ ತಂಡ 12 ವರ್ಷದ ಹಿಂದೆಯೆ ಸರ್ಕಾರಕ್ಕೆ ವರದಿ ನೀಡಿದ್ದು ಅದನ್ನು ಅಡಳಿತ ನಡೆಸಿರುವ ಸರ್ಕಾರಗಳು ಜಾರಿಗೊಳಿಸಿಲ್ಲ. ಹಾಗಾಗಿ ಬಡವರ ಪರ ಮತ್ತು ಧ್ವನಿ ಇಲ್ಲದ ಸಮಾಜಗಳಿಗೆ ಧ್ವನಿಯಾಗಿರುವ ಸಿದ್ದರಾಮಯ್ಯ ಸರ್ಕಾರದಲ್ಲಿ ಜಾರಿಗೊಳಿಸುವ ಜತೆಗೆ ಜೋಗಿ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಸಮಾರಂಭವನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸಲಿದ್ದಾರೆ. ಗುರುಗೋರಕ್ಷನಾಥ ಮಠದ ಯೋಗಿ ನಿವೃತ್ತಿನಾಥಜೀ ಸಾನ್ನಿಧ್ಯ ವಹಿಸುವರು. ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಉಪಸಭಾಪತಿ ರುದ್ರಪ್ಪ ಎಂ.ಲಮಾಣಿ, ಶಾಸಕರಾದ ಶ್ರೀನಿವಾಸ ಮಾನೆ, ಗೋಪಾಲಕೃಷ್ಣ ಬೇಳೂರು, ಭೀಮ್ಮಣ್ಣ ನಾಯ್ಕ, ಬಿ.ವೈ.ವಿಜಯೇಂದ್ರ, ಯು.ಬಿ.ಬಣಕಾರ್ ಆಗಮಿಸಲಿದ್ದಾರೆ ಎಂದು ತಿಳಿಸಿದರು. ಮುಖಂಡರಾದ ಯಲ್ಲಪ್ಪ ಜೋಗಿ, ಮಾರುತಿ ಜೋಗಿ, ಹೊಳೆಲಿಂಗಪ್ಪ ಚೌಹಾಣ್, ಎನ್.ಅಶೋಕ್ ಜೋಗಿ, ಗುಡ್ಡಪ್ಪ ಜೋಗಿ, ಆನಂದಪ್ಪ ಬಟ್ಟೆಮಲ್ಲಪ್ಪ ಜೋಗಿ, ಶಿವರುದ್ರಪ್ಪ ಜೋಗಿ ಗೆಂಡ್ಲಹೊಸೂರು, ಬಸವರಾಜ್ ಚೌಹಾಣ್, ನಿಂಗಪ್ಪ ಜೋಗಿ ಹುರುಳಿ ಇದ್ದರು.