

ಈ ನಿಟ್ಟಿನಲ್ಲಿ ಸಾಧಕರಿಗೆ ‘ಹೃದಯ’ಸ್ಥಾನವು ಅತ್ಯಂತ ಪವಿತ್ರ, ಗಹನ ಮತ್ತು ಶ್ರೇಷ್ಠವಾದದ್ದು. ಪರಮಹಂಸರು ತಮ್ಮಲ್ಲಿಗೆ ಬರುತ್ತಿದ್ದ ಸಾಧಕರಿಗೆ ಅನೇಕ ಸಂದರ್ಭಗಳಲ್ಲಿ ಹೃದಯ ರ್ಸ³ಸಿ ಭಗವತಿಯು ಇಲ್ಲಿದ್ದಾಳೆ ಎಂಬ ಭಾವನೆಯ ಮೂಲಕ ಅವರವರ ಸುಪ್ತಚೈತನ್ಯವನ್ನು ಉದ್ದೀಪನಗೊಳಿಸುತ್ತಿದ್ದರು. ಹೀಗೆ ಪರಮಹಂಸರು ‘ಹೃದಯ’ಸ್ಥಾನವನ್ನು ಆಧ್ಯಾತ್ಮಿಕ ಶಕ್ತಿಯ ಉಗಮಸ್ಥಾನ ಎಂದು ಸರ್ವರೂ ಅರಿಯುವಂತೆ ಮಾಡಿದರು.
ಶ್ರೀರಾಮಕೃಷ್ಣರು ಭಗವದಾನಂದ ವ್ಯಾಪಿಸಿದ ಸಂದರ್ಭಗಳಲ್ಲಿ ಭಕ್ತರಿಗೆ ಈ ಹೃದಯಮಂದಿರದ ಬಗ್ಗೆ, ಹೃದಯಶುದ್ಧತೆಯ ಬಗ್ಗೆ ವರ್ಣಿಸುತ್ತಿದ್ದರು. ಶ್ರೀರಾಮಕೃಷ್ಣರು ಹಾಗೂ ಭಕ್ತ ಈಶಾನನ ನಡುವೆ ಒಂದು ವಿಚಾರದ ಬಗ್ಗೆ ಸಂಭಾಷಣೆಯುಂಟಾಯಿತು. ಅದೇನೆಂದರೆ ‘ಈ ಜಗತ್ತಿನಲ್ಲಿ ಯಾರ ಹೃದಯ ದೊಡ್ಡದು, ಭವ್ಯವಾದುದು?’ ಎಂಬ ವಿಚಾರ.
‘ನಮ್ಮ ಸುತ್ತಮುತ್ತಲಿನಲ್ಲಿ ಇರತಕ್ಕವುಗಳಿಗಿಂತ ಭೂಮಿ ದೊಡ್ಡದು, ಭೂಮಿಗಿಂತ ದೊಡ್ಡದು ಸಾಗರ, ಸಾಗರಕ್ಕಿಂತ ದೊಡ್ಡದು, ಆಕಾಶ. ಆದರೆ ಭಗವಾನ್ ವಿಷ್ಣು ತನ್ನ ಒಂದು ಪಾದದಿಂದಲೇ ಸ್ವರ್ಗ, ಮರ್ತ್ಯ ಪಾತಾಳ, ಈ ತ್ರಿಭುವನಗಳನ್ನೂ ಅಳೆದುಬಿಟ್ಟ. ಆ ಮಹಾವಿಷ್ಣುವಿನ ಪಾದ ಸಂತನ ಹೃದಯದಲ್ಲಿ ರಾರಾಜಿಸುತ್ತಿದೆ. ಆದ್ದರಿಂದ ಸಂತನ ಹೃದಯ ಎಲ್ಲದಕ್ಕಿಂತ ದೊಡ್ಡದು, ವಿಶಾಲ.’ ಪರಮಹಂಸರು ಈ ರೀತಿ ಅತ್ಯಂತ ಸುಂದರವಾಗಿ ನೆರೆದಿದ್ದ ಭಕ್ತರಿಗೆಲ್ಲ ‘ಹೃದಯ’ದ ಬಗ್ಗೆ ಅಪೂರ್ವವಾಗಿ ತಿಳಿಸಿಕೊಡುತ್ತಾರೆ.
ಅವರ ಪ್ರಕಾರ ‘ಭಕ್ತನ ಹೃದಯ ಭಗವಂತನ ಬೈಠಕ್ಖಾನೆ.’ ನಿಜ! ಪರಿಶುದ್ಧ ಹೃದಯವಂತರಲ್ಲಿ ಆ ದೈವಿಕತೆ ಎಂಬುದು ತಾನೇತಾನಾಗಿ ಗೋಚರಿಸುತ್ತದೆ. ಈ ಕಾರಣದಿಂದಲೇ ತಮ್ಮಲ್ಲಿಗೆ ಬರುವ ಭಕ್ತರಿಗೆ, ಸಾಧಕರಿಗೆಲ್ಲ ಪರಮಹಂಸರು ‘ಹೃದಯ’ ಶುದ್ಧಿಯಾಗಿರಬೇಕು ಎಂದು ಬೋಧಿಸುತ್ತಿದ್ದರು. ಹೃದಯ ಪರಿಶುದ್ಧತೆಗೆ ಮೊದಲು ಆದ್ಯತೆ ನೀಡುತ್ತಿದ್ದರು. ಈ ಕಾರಣಕ್ಕಾಗಿಯೇ ನಿರ್ಜನಪ್ರದೇಶದಲ್ಲಿ ಅಥವಾ ಏಕಾಂತಸ್ಥಳಕ್ಕೆ ಹೋಗಿ ಗಾಯತ್ರೀ ಪಠಣ ಮಾಡಬೇಕೆಂದಿದ್ದಾನೆ ಈಶಾನ ಎಂಬ ಸಾಧಕ.
ಈ ವಿಚಾರವನ್ನು ಮುಂದುವರೆಸುತ್ತ ಪರಮಹಂಸರು ತಿಳಿಸುತ್ತಾರೆ, ‘ವಿಷಯಬುದ್ಧಿ (ಪ್ರಾಪಂಚಿಕ ಆಸಕ್ತಿ) ಇತ್ತು ಎಂದರೆ ಬ್ರಹ್ಮಜ್ಞಾನ ದೊರೆಯುವುದಿಲ್ಲ. ಈ ಕಲಿಯುಗದಲ್ಲಿ ಅನ್ನಗತ ಪ್ರಾಣವು ವಿಷಯಬುದ್ಧಿ ಬಿಟ್ಟು ತೊಲಗದು; ಮನಸ್ಸು, ರೂಪ, ರಸ, ಗಂಧ, ಸ್ಪರ್ಶ, ಶಬ್ದ ಇವುಗಳಲ್ಲೇ ಸರ್ವದಾ ನೆಲೆಸಿರುತ್ತದೆ’. ಸಾಧಕರು ಅತ್ಯಂತ ಸಾವಧಾನವಾಗಿ, ಹಂತಹಂತವಾಗಿ ಹೃದಯಶುದ್ಧಿಯನ್ನು ಹೊಂದಬೇಕು.
ಬ್ರಹ್ಮಸಮಾಜದ ಮಹಾನ್ ವ್ಯಕ್ತಿಯಾಗಿದ್ದ ಶ್ರೀ ಕೇಶವಚಂದ್ರ ಸೇನ್ನೊಂದಿಗೆ ಮಾತನಾಡುವಾಗ ಪರಮಹಂಸರು ಹೀಗೆ ತಿಳಿಸುತ್ತಾರೆ, ‘ಭಗವಂತ ಯಾರ ಮೂಲಕ ವಿಶೇಷವಾಗಿ ಕ್ರೀಡಿಸುತ್ತಾನೋ, ಆತನಲ್ಲಿ ಭಗವಂತನ ಶಕ್ತಿ ವಿಶೇಷ ರೂಪದಲ್ಲಿರುತ್ತದೆ. ಜಮೀನುದಾರ ತನ್ನ ಎಸ್ಟೇಟಿನಲ್ಲಿ ಎಲ್ಲಿ ಬೇಕಾದರೂ ಇರಬಲ್ಲ. ಆದರೆ ಒಂದು ನಿರ್ದಿಷ್ಟ ಬೈಠಕ್ಖಾನೆಯಲ್ಲಿ ಆತ ಪ್ರಾಯಿಕವಾಗಿ ಇರುತ್ತಾನೆ. ಭಕ್ತನ ಹೃದಯ ಭಗವಂತನ ಬೈಠಕ್ಖಾನೆ, ಭಕ್ತನ ಹೃದಯದಲ್ಲಿ ಕ್ರೀಡಿಸಲು ಆತ ಇಚ್ಛಿಸುತ್ತಾನೆ. ಭಕ್ತನ ಹೃದಯದಲ್ಲಿ ಆತನ ವಿಶೇಷ ಶಕ್ತಿ ಬಂದು ನೆಲೆಸುತ್ತದೆ.’ ಸಾಧಕನು ಬಾಹ್ಯವಾಗಿ ಏನೇ ಆಚರಣೆ, ಆರಾಧನೆ ಇತ್ಯಾದಿ ನಡೆಸಲಿ, ಮುಖ್ಯವಾಗಿ ‘ಹೃದಯ ಶುದ್ಧಿ’ಯಾಗುವಂತೆ ಪ್ರಯತ್ನಿಸಬೇಕು.
ನಿಜಕ್ಕೂ ಈ ತೆರನಾದ ಸುಲಭಮಾರ್ಗಗಳು ಕೇವಲ ಪರಮಹಂಸರಿಂದ ಉಪದೇಶಿಸಲ್ಪಡುತ್ತವೆ. ಸಾಧಕರು ಪ್ರಯತ್ನಿಸಿ ಸಫಲರಾಗಬೇಕು. ಇದೇ ಸಾಧನೆಯ ಮುಖ್ಯ ಗುರಿ. ಒಮ್ಮೆ ಹೃದಯ ಪರಿಶುದ್ಧವಾಯಿತು ಎಂದರೆ, ಭಗವನ್ನಾಮ ಸ್ಮರಣೆ ತಾನೇತಾನಾಗಿ ಆರಂಭವಾಗುತ್ತದೆ. ಭಗವಂತನ ಪವಿತ್ರ ಕೀರ್ತನೆ ಕೇಳಿದಾಕ್ಷಣ ಮನಸ್ಸು ಊರ್ಧ್ವಸ್ತರಕ್ಕೇರುತ್ತದೆ. ಈ ತೆರನಾದ ಸ್ಥಿತಿ ಪರಮಹಂಸರಿಗೆ ಅನಾಯಾಸವಾಗಿ ದೊರಕುತ್ತಿತ್ತು.
ಮಹೇಂದ್ರನಾಥ ಗುಪ್ತನು ದಕ್ಷಿಣೇಶ್ವರದಲ್ಲಿ ತನ್ನ ಅನುಭವವನ್ನು ಹೀಗೆ ಬಣ್ಣಿಸಿದ್ದಾನೆ. ‘ಪರಮಹಂಸರು ಸ್ಥಿರವಾಗಿ ನಿಂತಿದ್ದಾರೆ. ನರೇಂದ್ರ (ಸ್ವಾಮಿ ವಿವೇಕಾನಂದ) ಹಾಡುತ್ತಿದ್ದಾನೆ. ಹತ್ತಿರವೇ ನಾಲ್ಕೈದು ಜನ ಭಕ್ತರೂ ನಿಂತಿದ್ದಾರೆ. ಪರಮಹಂಸರನ್ನು ಬಿಟ್ಟರೆ ಮತ್ಯಾರೂ ಇಷ್ಟು ಮಧುರವಾಗಿ ಹಾಡುವುದನ್ನು ಆತ ಕೇಳಿರಲಿಲ್ಲ. ಹಾಗೆಯೇ ಪರಮಹಂಸರ ಕಡೆ ನೋಡಿ ಆಶ್ಚರ್ಯಚಕಿತನಾಗಿ ನಿಂತುಕೊಂಡ.
ಆ ಸ್ಥಿತಿಯನ್ನು ಕಂಡು ಭಕ್ತರಿಂದ ಅದೇ ಸಮಾಧಿಸ್ಥಿತಿ ಎಂದು ತಿಳಿದುಕೊಂಡ. ಭಗವಂತನ ಧ್ಯಾನದಲ್ಲಿರುವಾಗ ಮನುಷ್ಯ ಇಷ್ಟರಮಟ್ಟಿಗೆ ಬಾಹ್ಯಶೂನ್ಯನಾಗಲು ಸಾಧವೇ? ಎಂತಹ ಉನ್ನತ ಮಟ್ಟದ ಶ್ರದ್ಧಾ ಭಕ್ತಿಗಳಿದ್ದರೆ ಈ ರೀತಿ ಅವಸ್ಥೆ ಬರುತ್ತದೆಯೋ? ಈ ಸಂದರ್ಭದಲ್ಲಿ ನರೇಂದ್ರ ತನ್ನ ಸುಮಧುರ ಕಂಠದಿಂದ ಹಾಡುತ್ತಿದ್ದಾನೆ. ಆಗ ಪರಮಹಂಸರ ಶರೀರ ಕಂಪಿಸಲಾರಂಭಿಸಿತು. ರೋಮಾಂಚನವಾಗಿ ಕಣ್ಣುಗಳಿಂದ ಪ್ರೇಮಾಶ್ರು ಸುರಿಯಲಾರಂಭಿಸಿತು.
ಕೇವಲ ಭಗವನ್ನಾಮ ಸ್ಮರಣೆ ಕಿವಿಗೆ ಬಿದ್ದೊಡನೆಯೇ ಪರಮಹಂಸರು ಸಮಾಧಿಸ್ಥಿತಿಯನ್ನು ತಲುಪಿದರು ಎಂಬುದನ್ನರಿತಾಗ ಶ್ರೀರಾಮಕೃಷ್ಣ ಪರಮಹಂಸರ ಹೃದಯ ಅದೆಷ್ಟು ಪರಿಶುದ್ಧವಾಗಿರಬಹುದು ಎಂದು ಪರಮಾಶ್ಚರ್ಯವಾಗುತ್ತದೆ. ಇದೇ ಹೃದಯ ಪರಿಶುದ್ಧತೆಯ ಮಹತ್ತರವಾದ ಸ್ತರ.