ಪರಪ್ಪನ ಅಗ್ರಹಾರ ಜೈಲು ಪಾಲಾದ ನಟ ದರ್ಶನ್

darshan
Published on

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ನಾಲ್ವರು ಆರೋಪಿಗಳು ಜೈಲುಪಾಲಾಗಿದ್ದಾರೆ.
ಬಂದಿತ ನಾಲ್ವರು ಆರೋಪಿಗಳನ್ನು 13 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ವಿಧಿಸಿ ಬೆಂಗಳೂರಿನ 24 ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ. ಇದರೊಂದಿಗೆ ೧೩ ವರ್ಷಗಳ ಬಳಿಕ ನಟ ದರ್ಶನ್ ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಪಾಲಾಗಿದ್ದಾರೆ. ಈ ಹಿಂದೆ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದ್ದರು. ಇದೀಗ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.
ರೇಣುಕಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್(೪೭) ಹಾಗೂ ೯ ನೇ ಆರೋಪಿ ಧನರಾಜ್(೨೭), ೧೦ ನೇ ಆರೋಪಿ ವಿನಯ್(೩೮) ಮತ್ತು ೧೪ ನೇ ಆರೋಪಿ ಪ್ರದೂಷ್(೪೦) ಜೈಲು ಪಾಲಾದ ಆರೋಪಿಗಳು. ಎರಡು ದಿನದ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಶನಿವಾರ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಪೊಲೀಸರು ಮತ್ತೆ ತಮ್ಮ ಕಸ್ಟಡಿಗೆ ಕೇಳಲಿಲ್ಲವಾದ್ದರಿಂದ ದರ್ಶನ್ ಹಾಗೂ ಇತರೆ ಮೂವರು ಆರೋಪಿಗಳಿಗೆ ೧೩ ದಿನಗಳ ಕಾಲ (ಜುಲೈ ೪ ರವರೆಗೆ) ನ್ಯಾಯಾಂಗ ಬಂಧನ ವಿಧಿಸಲಾಯಿತು. ಇದೇ ಪ್ರಕರಣದ ಆರೋಪಿಗಳಾದ ಪವಿತ್ರಾಗೌಡ ಹಾಗೂ ಇತರರಿಗೆ ಮೂರು ದಿನಗಳ ಹಿಂದೆಯೇ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ದರ್ಶನ್‌ನನ್ನು ೩ ಬಾರಿ ಕಸ್ಟಡಿಗೆ ಪಡೆದಿದ್ದರು:
ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ ೧೧ ರಂದು ದರ್ಶನ್, ಪವಿತ್ರಾ ಗೌಡ ಸೇರಿದಂತೆ ೧೭ ಆರೋಪಿಗಳನ್ನು ಬಂಧಿಸಲಾಗಿತ್ತು. ಆ ದಿನದಿಂದಲೂ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದರು. ಮೊದಲ ಬಾರಿ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೇಳಲಾಗಿತ್ತು, ನಂತರ ಒಂದು ದಿನ ಮುಂಚಿತವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಐದು ದಿನಗಳ ಕಾಲ ಕಸ್ಟಡಿಗೆ ಪಡೆಯಲಾಯಿತು. ಅದಾದ ಬಳಿಕ ಮತ್ತೆ ಎರಡು ದಿನಗಳ ಕಾಲ ಕಸ್ಟಡಿಗೆ ಕೇಳಿ ಪಡೆಯಲಾಗಿತ್ತು. ಒಟ್ಟು ೧೨ ದಿನಗಳ ಕಾಲ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದರು. ಈಗ ೧೩ ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಬೇಕಿದೆ.

ಬೇರೆ-ಬೇರೆ ಜೈಲುಗಳಿಗೆ ವರ್ಗಾವಣೆ ಮಾಡಿ:
ಪೊಲೀಸರು, ಆರೋಪಿಗಳಿಗೆ ನ್ಯಾಯಾಂಗ ಬಂಧನ ಕೋರಿ ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ ನ್ಯಾಯಾಧೀಶ ಜಯಕುಮಾರ್ ಜಾಟ್ಲಾ ಅವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ವಿಚಾರಣೆಗೆ ಕರೆತರುವ ಮುನ್ನ ಪೊಲೀಸರು ಆರೋಪಿಗಳ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದರು. ನ್ಯಾಯಾಲಯಕ್ಕೆ ಬಂದ ಬಳಿಕವೂ ಸಹ ನ್ಯಾಯಾಧೀಶರು ಆರೋಪಿಗಳನ್ನು ಉದ್ದೇಶಿಸಿ, ಪೊಲೀಸರಿಂದ ಏನಾದರೂ ಸಮಸ್ಯೆ ಆಗಿದೆಯೇ ಎಂದು ಕೇಳಿ ಮಾಹಿತಿ ಪಡೆದುಕೊಂಡರು. ಅಂತಿಮವಾಗಿ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದರು.
ಈ ವೇಳೆ ಪೊಲೀಸರ ಪರ, ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿ, ಈ ಪ್ರಕರಣದ ಆರೋಪಿಗಳನ್ನು ಬೇರೆ-ಬೇರೆ ಜೈಲುಗಳಿಗೆ ವರ್ಗಾವಣೆ ಮಾಡುವಂತೆ ಮನವಿ ಮಾಡಿದರು. ಕೆಲ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಮೇಲೆ ದರ್ಶನ್ ಪರ ಇರುವ ಇತರೆ ಆರೋಪಿಗಳು ಹಲ್ಲೆ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಅವರನ್ನು ತುಮಕೂರು ಜೈಲ್ಲಿಗೆ ವರ್ಗಾಹಿಸುವಂತೆ ಮನವಿ ಮಾಡಿದರು. ಆದರೆ ಇದಕ್ಕೆ ಆರೋಪಿಗಳ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ಈ ವಿಚಾರದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net