ಪರಪ್ಪನ ಅಗ್ರಹಾರ ಜೈಲು ಪಾಲಾದ ಸೋನು ಶ್ರೀನಿವಾಸ ಗೌಡ:14 ದಿನ ನ್ಯಾಯಾಂಗ ಬಂಧನ ಆದೇಶಿಸಿದ ಕೋರ್ಟ್

Sonu Gowda
Published on

ಬೆಂಗಳೂರು: ಬಾಲಕಿಯನ್ನು ಅಕ್ರಮವಾಗಿ ದತ್ತು ಪಡೆದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಬಿಗ್‌ಬಾಸ್ ಖ್ಯಾತಿಯ ರೀಲ್ಸ್ ರಾಣಿ ಸೋನು ಶ್ರೀನಿವಾಸ ಗೌಡಳನ್ನು ನಗರದ ಸಿಜೆಎಂ ಕೋರ್ಟ್ ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ವಿವಾದಿತ ರೀಲ್ಸ್ ಮಾಡುತ್ತಿದ್ದ ಸೋನು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾಳೆ.

ಕಳೆದ ಶುಕ್ರವಾರ ಆಕೆಯನ್ನು ಪೊಲೀಸರು ಬಂಧಿಸಿದಾಗ ಕೋರ್ಟ್ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಪೊಲೀಸ್ ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸೋಮವಾರ ಮತ್ತೆ ಕೋರ್ಟ್‌ಗೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆಕೆಗೆ ೧೪ ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.

ಪಾಲಕರಿಗೆ ೫೦ ಸಾವಿರ ರೂ. ಕೊಟ್ಟಿದ್ದಳು:
ಬಾಲಕಿಯನ್ನು ಅಕ್ರಮವಾಗಿ ದತ್ತು ಪಡೆದ ದೂರಿನ ಹಿನ್ನೆಲೆಯನ್ನು ಸೋನು ಶ್ರೀನಿವಾಸ ಗೌಡ ಅವರನ್ನು ಬಂಧಿಸಿ, ಬಳಿಕ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದೆ. ಮತ್ತೊಂದೆಡೆ ಮಗುವಿನ ಪಾಲಕರ ಊರಾದ ರಾಯಚೂರಿಗೆ ತೆರಳಿ ಸ್ಥಳಮಹಜರು ನಡೆಸಲಾಗಿದೆ. ಈ ವೇಳೆ ಮಗುವಿನ ಪಾಲಕರನ್ನು ವಿಚಾರಣೆ ನಡೆಸಿದ ವೇಳೆ ಸೋನು ಶ್ರೀನಿವಾಸ್ ಗೌಡ ೫೦ ಸಾವಿರ ರೂ. ಕೊಟ್ಟಿರುವುದು ಬೆಳಕಿಗೆ ಬಂದಿದೆ. ಮತ್ತೊಮ್ಮೆ ಪಾಲಕರಿಗೆ ನೋಟಿಸ್ ನೀಡಿ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪಶ್ವಿಮ ವಿಭಾಗದ ಡಿಸಿಪಿ ಗಿರೀಶ್ ವಿಜಯವಾಣಿಗೆ ತಿಳಿಸಿದ್ದಾರೆ.

ಮಗುವಿನ ಜತೆ ರೀಲ್ಸ್ ಮಾಡುತ್ತಿದ್ದಳು:
ಸೋನು ಶ್ರೀನಿವಾಸ್ ಗೌಡ ರಾಯಚೂರು ಮೂಲದ ದಂಪತಿಯ ೮ ವರ್ಷದ ಮಗುವಿನ ಜತೆ ಮುದ್ದಾಟವಾಡುತ್ತಾ, ರೀಲ್ಸ್ ಮಾಡುತ್ತಿದ್ದಳು ಬಳಿಕ ಮಗುವನ್ನು ತನಗೇ ಕೊಡಬೇಕು ಎಂದು ಹಠ ಹಿಡಿದಿದ್ದಳಂತೆ. ೧೦ ಲಕ್ಷ ರೂ. ಆಮಿಷವನ್ನೂ ಒಡ್ಡಿದ್ದಳು ಎನ್ನಲಾಗಿದೆ. ಆದರೆ ಮನೆಯವರು ಕೊಟ್ಟಿರಲಿಲ್ಲ. ಆದರೆ, ಕಳೆದ ಮಾ. ೧ರಂದು ರಾಯಚೂರಿನ ಮಗುವಿನ ಮನೆಗೆ ಹೋಗಿದ್ದ ಸೋನು ಗೌಡ ಮಲಗಿದ್ದ ಮಗುವನ್ನು ಎತ್ತಿಕೊಂಡು ಬಂದಿದ್ದಾಳೆ ಎನ್ನಲಾಗಿದೆ. ಮಗಳು ೧೫ ದಿನ ನನ್ನ ಬಳಿ ಇರಲಿ. ಮಗು, ಅಪ್ಪ ಅಮ್ಮ ಬೇಕು ಎಂದಾಗ ನಿಮ್ಮ ಬಳಿ ಕರೆದುಕೊಂಡು ಬರುತ್ತೇನೆ. ಮಗಳನ್ನು ನೋಡಬೇಕು ಎನಿಸಿದರೆ ನೀವೂ ಕೂಡ ಬೆಂಗಳೂರಿಗೆ ಬನ್ನಿ ಎಂದಿದ್ದಳಂತೆ. ಮಗುವನ್ನು ಬೆಂಗಳೂರಿಗೆ ಕರೆದುಕೊಂಡು ಬಂದ ಬಳಿಕ, ನಾನು ಮಗುವನ್ನು ದತ್ತು ತೆಗೆದುಕೊಂಡಿದ್ದೇನೆ ಎಂದು ಸೋನು ಗೌಡ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಳು. ಆದರೆ, ಅವಿವಾಹಿತೆಯಾಗಿರುವ ಆಕೆ ಹೇಗೆ ದತ್ತು ಪಡೆದುಕೊಂಡಳು. ಅದಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಪಾಲನೆ ಮಾಡಲಾಗಿದೆಯಾ ಎಂಬ ಬಗ್ಗೆ ವಿಚಾರಿಸಿದಾಗ ಯಾವುದೇ ಕ್ರಮಗಳ ಪಾಲನೆ ಆಗಿಲ್ಲದಿರುವುದು ಪತ್ತೆಯಾಗಿತ್ತು. ಆಗ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಯೊಬ್ಬರು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಜತೆಗೆ ಮಗುವನ್ನು ದತ್ತು ಪಡೆದ ಬಗ್ಗೆ ಸಾಮಾಜಿಕವಾಗಿ ಹೇಳಿಕೊಳ್ಳುವಂತಿಲ್ಲ ಎಂಬ ನಿಯಮದ ಉಲ್ಲಂಘನೆಯಾಗಿದೆ ಎಂಬುದು ಸಹ ಸಾಬೀತಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net