ಪ್ರಾಥಮಿಕ ತನಿಖೆ ನಡೆಸದೆ ಪ್ರಾಸಿಕ್ಯೂಷನ್‌ಗೆ ಅನುಮತಿ : ಎಜಿ ಶಶಿಕಿರಣ್‌ಶೆಟ್ಟಿ ವಾದ

highcourt
Published on

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮತ್ತೆ ಮುಂದೂಡಿದೆ. ಮುಂದಿನ ವಿಚಾರಣೆಯನ್ನು ಸೆ.12ರಂದು ನಿಗದಿ ಮಾಡಲಾಗಿದ್ದು, ಅಲ್ಲಿಯವರೆಗೂ ಸಿಎಂಗೆ ನಿರಾಳತೆ ಸಿಕ್ಕಿದೆ. ಸೆ.12ರಂದು ವಾದ-ಪ್ರತಿವಾದ ಬಹುತೇಕ ಪೂರ್ಣಗೊಳ್ಳಲಿದೆ.

ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ಭ್ರಷ್ಟಾಚಾರ ನಿರೋಧಕ ಕಾಯ್ದೆ 17ಎ ಅನ್ವಯ ಪ್ರಾಸಿಕ್ಯೂಷನ್‌ಗೆ ಪೊಲೀಸರು ಅನುಮತಿ ಕೇಳಬಹುದು.

ಅದಕ್ಕೂ ಮೊದಲು ತನಿಖಾಧಿಕಾರಿ ಪ್ರಾಥಮಿಕ ತನಿಖೆ ನಡೆಸಬೇಕು. ಪ್ರಾಥಮಿಕ ತನಿಖೆ ವಿವರವನ್ನು ಸಕ್ಷಮ ಪ್ರಾಧಿಕಾರಕ್ಕೆ ನೀಡಬೇಕು. ಇದು 22 ವರ್ಷಕ್ಕಿಂತ ಹಳೆಯ ಪ್ರಕರಣ, ಹೀಗಾಗಿ ಪ್ರಾಥಮಿಕ ತನಿಖೆ ಅಗತ್ಯವಿದೆ. ಆದರೆ ರಾಜ್ಯಪಾಲರು ಪ್ರಾಥಮಿಕ ತನಿಖೆ ಇಲ್ಲದೆಯೇ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂದು ನ್ಯಾಯಪೀಠದ ಮುಂದೆ ವಿವರಿಸಿದರು.

ಪ್ರಕರಣ ಸಂಬಂಧ ಪೊಲೀಸರಿಗೆ ದೂರು ನೀಡಿದ ನಂತರ 15 ದಿನಗಳಿಂದ 6 ವಾರ ಕಾಲಾವಕಾಶ ಇದೆ. ಆದರೆ, ಅದನ್ನೂ ಲೆಕ್ಕಿಸದೆ ರಾಜ್ಯಪಾಲರಿಗೆ ದೂರು ನೀಡಲಾಗಿದೆ. 17ಎ ಅಡಿ ಕೇಂದ್ರ ಸರ್ಕಾರ ಮಾರ್ಗಸೂಚಿ ರೂಪಿಸಿದೆ. ರಾಜ್ಯಪಾಲರು ಆ ಮಾರ್ಗಸೂಚಿ ಪಾಲಿಸಿಲ್ಲ. ಈ ರೀತಿ ಎಲ್ಲ ನಾಗರಿಕರು ಎಲ್ಲರ ವಿರುದ್ಧ ದೂರು ನೀಡಿದರೆ ಸಮಸ್ಯೆ ಆಗಲಿದೆ. ರಾಜ್ಯಪಾಲರು ಸರ್ಕಾರಕ್ಕೆ ಶೋಕಾಸ್ ನೋಟಿಸ್ ನೀಡುವ ಮುನ್ನ ತನಿಖಾಧಿಕಾರಿಯಿಂದ ವರದಿ ಪಡೆಯಬೇಕಿತ್ತು.

ಇಲ್ಲಿ ಹಾಗಾಗಿಲ್ಲ. 17ಎ ಅಡಿ ಅನುಮತಿ ಸೂಚಿಸುವ ಮೊದಲು ಕೃತ್ಯ ಕರ್ತವ್ಯದ ಭಾಗವಾಗಿತ್ತೇ ಎನ್ನುವುದನ್ನು ಪರಿಶೀಲಿಸಬೇಕು. ಸಿಎಂ ಕೈಗೊಂಡ ನಿರ್ಧಾರ, ಶಿಾರಸಿನಲ್ಲಿ ಅಪರಾಧದ ಅಂಶವಿರಬೇಕು. ಆದರೆ, ಈ ಪ್ರಕರಣದಲ್ಲಿ ಸಿದ್ದರಾಮಯ್ಯ ತೀರ್ಮಾನ ಕೈಗೊಂಡಿಲ್ಲ. ಸಿಎಂ ಕರ್ತವ್ಯದ ಭಾಗವಾಗಿ ಕೃತ್ಯ ನಡೆದಿಲ್ಲ ಎಂದು ವಾದಿಸಿದರು.

ರಾಜ್ಯಪಾಲರ ಪರ ವಕೀಲರು 3 ಸಂಪುಟಗಳ ದಾಖಲೆಗಳನ್ನು ನೀಡಿದ್ದಾರೆ. ಆದರೆ, ಶೋಕಾಸ್ ನೋಟಿಸ್ ನೀಡುವ ಮುನ್ನ ಪ್ರಾಥಮಿಕ ವರದಿ ಇಲ್ಲ. 17ಎ ಅಡಿ ರಾಜ್ಯಪಾಲರೇ ಪ್ರಾಥಮಿಕ ತನಿಖೆ ನಡೆಸುವಂತಿಲ್ಲ. ತನಿಖಾಧಿಕಾರಿಯಂತೆ ರಾಜ್ಯಪಾಲರು ವರ್ತಿಸುವಂತಿಲ್ಲ. ಮುಖ್ಯವಾಗಿ ಈ ರೀತಿಯ ಪ್ರಕರಣದಲ್ಲಿ ತನಿಖಾಧಿಕಾರಿ ಪ್ರಾಥಮಿಕ ತನಿಖೆ ನಡೆಸಬೇಕು, ರಾಜ್ಯಪಾಲರು ಅನುಸರಿಸಿದ ಪ್ರಕ್ರಿಯೆಗೆ ಕಾನೂನಿನಡಿ ಅವಕಾಶವಿಲ್ಲ.

ರಾಜ್ಯಪಾಲರು ಖಾಸಗಿ ದೂರುದಾರರಿಗೆ ಅವಕಾಶವನ್ನೇ ನೀಡಬಾರದಿತ್ತು. ದೂರುದಾರ ಪ್ರದೀಪ್ ಕುಮಾರ್ ಪೊಲೀಸರಿಗೆ ದೂರನ್ನೇ ನೀಡಿರಲಿಲ್ಲ. ಖಾಸಗಿ ದೂರುದಾರರ ಮನವಿಯನ್ನು ರಾಜ್ಯಪಾಲರು ಹಿಂತಿರುಗಿಸಬೇಕಿತ್ತು ಎಂದು ವಾದ ಮಂಡಿಸಿದರು.

ಸಚಿವ ಸಂಪುಟದ ನಿರ್ಧಾರವನ್ನು ತಿರಸ್ಕರಿಸುವ ಅನಿಯಂತ್ರಿತ ಅಧಿಕಾರ ರಾಜ್ಯಪಾಲರಿಗಿಲ್ಲ. ಈ ರೀತಿ ನಡೆದಲ್ಲಿ ರಾಜ್ಯಪಾಲರು ನೀಡಿರುವ ಆದೇಶದಲ್ಲಿ ಇದಕ್ಕೆ ಕಾರಣಗಳಿರಬೇಕು, ಅವರು ಪರಿಶೀಲಿಸಿದ ಕಡತದಲ್ಲಲ್ಲ. ರಾಜ್ಯಪಾಲರು ಅನುಸರಿಸಿದ ಈ ಪ್ರಕ್ರಿಯೆಗೆ ಕಾನೂನಿನಡಿ ಅವಕಾಶವಿಲ್ಲ ಎಂದು ಎಜಿ ನ್ಯಾಯಪೀಠದ ಗಮನಕ್ಕೆ ತಂದರು.

ಸಿಎಂ ಅಧಿಕಾರ ದುರ್ಬಳಕೆ ಸ್ಪಷ್ಟ

* ಸ್ನೇಹಮಯಿ ಕೃಷ್ಣ ಪರ ವಕೀಲೆ ವಾದ

ಸ್ನೇಹಮಯಿ ಕೃಷ್ಣ ಪರ ವಕೀಲೆ ಲಕ್ಷ್ಮಿ ಅಯ್ಯಂಗಾರ್ ವಾದ ಮಂಡಿಸಿ, 1996-1999 ಅವಧಿಯಲ್ಲಿ ಅರ್ಜಿದಾರರು ಡಿಸಿಎಂ ಆಗಿದ್ದಾಗ ಡಿನೋಟಿಫಿಕೇಷನ್ ಮಾಡಲಾಗಿದೆ. 2004-2007 ರಲ್ಲಿ ಡಿಸಿಎಂ ಆಗಿದ್ದಾಗ ಭೂಪರಿವರ್ತನೆ ಮಾಡಲಾಗಿದೆ. 2013 -2018ವರೆಗೆ ಸಿಎಂ ಆಗಿದ್ದಾಗ ಪರಿಹಾರದ ನಿವೇಶನಗಳಿಗೆ ಅರ್ಜಿ ಸಲ್ಲಿಸಲಾಗಿದೆ. 2018ರಿಂದ 2022ವರೆಗೆ ಸಿದ್ದರಾಮಯ್ಯ ಶಾಸಕರಾಗಿದ್ದರು. ಸರ್ಕಾರಿ ಗೆಸ್ಟ್ ಹೌಸ್‌ನಲ್ಲಿ ಮುಡಾದಿಂದ ಕ್ರಯಪತ್ರ ಮಾಡಿಕೊಡಲಾಗಿದೆ.

ಉಪನೋಂದಣಾಧಿಕಾರಿ ಕಚೇರಿಗೆ ಹೋಗದೇ ಕ್ರಯಪತ್ರ ಮಾಡಲಾಗಿದೆ. ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗಲೇ ಈ ಎಲ್ಲ ಚಟುವಟಿಕೆ ನಡೆದಿವೆ. ಅವರ ಪತ್ನಿಗೆ ಬೇರೆ ಆದಾಯದ ಮೂಲಗಳಿರಲಿಲ್ಲ. ಆದಾಯ ತೆರಿಗೆ ರಿಟರ್ನ್ ಅನ್ನು ಪತ್ನಿ ಫೈಲ್ ಮಾಡಿಲ್ಲ. ಈ ಎಲ್ಲ ಘಟನೆಗಳಿಂದಾಗಿ ಮುಖ್ಯಮಂತ್ರಿ ಅಧಿಕಾರವನ್ನು ದುರ್ಬಳಕೆ ಮಾಡಿರುವುದು ಸ್ಪಷ್ಟವಾಗಿ ತಿಳಿದುಬರುತ್ತದೆ. ಹೀಗಾಗಿ ಪತ್ನಿಯ ಆಸ್ತಿಯನ್ನು ಪತಿಯ ಆಸ್ತಿ ಎಂದೇ ಪರಿಗಣಿಸಬೇಕು. ಸಿದ್ದರಾಮಯ್ಯ ಮೇಲಿನ ಆರೋಪಗಳಿಗೆ ಪುರಾವೆಗಳಿವೆ ಎಂದರು.

12ಕ್ಕೆ ವಿಚಾರಣೆ ಪೂರ್ಣ

ವಾದ-ಪ್ರತಿವಾದ ಆಲಿಸಿದ ಬಳಿಕ ಮೊದಲೇ ನಿಗಿದಯಾಗಿದ್ದಂತೆ ದೂರುದಾರರ ವಾದಕ್ಕೆ ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂ್ವ ಉತ್ತರಿಸಲು ವಿಚಾರಣೆಯನ್ನು ಸೆ.12ಕ್ಕೆ ಮುಂದೂಡಿತು. ಅಂದು ವಿಚಾರಣೆ ಮುಕ್ತಾಯಗೊಳಿಸಲಾಗುವುದು ಎಂದು ನ್ಯಾಯಪೀಠ ಹೇಳಿದೆ. ಜತೆಗೆ ಪ್ರಕರಣದಲ್ಲಿ ಸಿಎಂ ವಿರುದ್ಧದ ದೂರುಗಳನ್ನು ಆಲಿಸಲು ಉದ್ದೇಶಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆಯನ್ನು ಸಹ ಮುಂದಿನ ವಿಚಾರಣೆಯ ದಿನಾಂಕದವರೆಗೆ ಮುಂದೂಡುವಂತೆ ಆ.19ರ ಮಧ್ಯಂತರ ಆದೇಶವನ್ನು ನ್ಯಾಯಾಲಯ ವಿಸ್ತರಿಸಿದೆ.

ನ್ಯಾಯಮೂರ್ತಿ ಕೇಳಿದ ಪ್ರಶ್ನೆಗಳು

- ಎಫ್‌ಐಆರ್ ದಾಖಲಿಸುವ ಮೊದಲು ಪ್ರಾಥಮಿಕ ತನಿಖೆ ಅಗತ್ಯವೆಂದಿದೆ. ಆದರೆ, 17ಎ ಅನ್ವಯ ಅನುಮತಿಗೆ ಪ್ರಾಥಮಿಕ ತನಿಖೆ ಆಗಿರಬೇಕೆಂದಿಲ್ಲ? ವಿಚಾರಣೆ, ತನಿಖೆಗೂ ಮುನ್ನ 17ಎ ಅನುಮತಿ ಬೇಕಲ್ಲವೇ?

- ಎಲ್ಲ ನಾಗರಿಕರು ಎಲ್ಲರ ವಿರುದ್ಧ ದೂರು ನೀಡಿದರೆ ಸಮಸ್ಯೆ ಆಗಲಿದೆ. ಹೀಗಾಗಿ ಡಾ.ಅಶೋಕ್ ಪ್ರಕರಣದಲ್ಲಿ ಮಾರ್ಗಸೂಚಿ ರೂಪಿಸಲಾಗಿದೆ.

- ಎಫ್‌ಐಆರ್ ದಾಖಲಿಸುವ ಮುನ್ನ 17ಎ ಅನುಮತಿ ಪಡೆಯಬೇಕು. ಕೋರ್ಟ್ ಸೂಚಿಸಿದ್ದರೆ ಎಫ್‌ಐಆರ್ ದಾಖಲಾಗುತ್ತಿತ್ತು. ಇದನ್ನು ಪಡೆಯಲು ಖಾಸಗಿ ದೂರುದಾರರಿಗೆ ಅನುಮತಿಗೆ ಅವಕಾಶ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net