

ಹಿರಿಯೂರು: ತಾಲೂಕಿನ ಪ್ರತಿ ಗ್ರಾಮಕ್ಕೂ ರಸ್ತೆ, ಸಾರಿಗೆ ಸಂಪರ್ಕ, ಶುದ್ಧ ಕುಡಿವ ನೀರು ಪೂರೈಕೆಗೆ ಆದ್ಯತೆ ನೀಡಲಾಗುವುದು ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ತಾಲೂಕಿನ ಹೂವಿನಹೊಳೆ-ಮ್ಯಾದನಹೊಳೆ ಮಾರ್ಗದಲ್ಲಿ ಸರ್ಕಾರಿ ಬಸ್ ಸಂಚಾರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಗ್ರಾಮೀಣ ಜನತೆಗೆ ಶುದ್ಧ ಕುಡಿವ ನೀರು, ಗುಣಮಟ್ಟದ ಆರೋಗ್ಯ ಸೇವೆ, ಬಡ ಕುಟುಂಬದ ಮಕ್ಕಳ ಉಜ್ವಲ ಭವಿಷ್ಯಕ್ಕೆ ನೆರವಾಗಲು ಗುಣಮಟ್ಟದ ಶಿಕ್ಷಣ ನೀಡಲು ವಿಶೇಷ ಆದ್ಯತೆ ನೀಡಲಾಗುವುದು ಎಂದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ-ಶಕ್ತಿ-ಜ್ಯೋತಿ ಯೋಜನೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಮಾಜಿಕ ನ್ಯಾಯ, ಜನಪರ ಯೋಜನೆ ಜಾರಿ ಸಾಧ್ಯ ಎಂಬ ನಂಬಿಕೆ ಜನರಲ್ಲಿ ಬೇರೂರಿದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸರ್ವ ಸ್ಪರ್ಶಿ ಆಡಳಿತದ ಸಂಕಲ್ಪ ಮಾಡಿದ್ದು, ಜಾತ್ಯತೀತ ತತ್ವ, ಸಾಮಾಜಿಕ, ನ್ಯಾಯ, ಪಂಚ ಗ್ಯಾರಂಟಿ ಯೋಜನೆ ಯಶಸ್ವಿ ಅನುಷ್ಠಾನಗೊಳಿಸಿರುವುದು ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪಕ್ಷಕ್ಕೆ ಶ್ರೀರಕ್ಷೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಧರ್ಮಪುರ ಫೀಡರ್ ನಾಲೆ, ಬಹು ಗ್ರಾಮ ಕುಡಿವ ನೀರಿನ ಯೋಜನೆ ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು. ಹಂತ ಹಂತವಾಗಿ ತಾಲೂಕಿನ ಎಲ್ಲ ಕೆರೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಗ್ರಾಮಸ್ಥರಾದ ರಂಗಸ್ವಾಮಿ, ಈಶ್ವರಪ್ಪ, ವಕೀಲ ಮಹಂತೇಶ್, ತಿಪ್ಪೇಸ್ವಾಮಿ, ಶಿವಮೂರ್ತಿ, ಮಂಜಣ್ಣ, ಈರಣ್ಣ, ಲಕ್ಷ್ಮಣ, ಶಶಿಕಲಾ, ಗೀತಾ, ಜಯಶ್ರೀ, ಗ್ರಾಪಂ ಅಧ್ಯಕ್ಷೆ ಸುಭದ್ರಮ್ಮ, ಲಕ್ಷ್ಮೀದೇವಿ, ಹೇಮೇಗೌಡ, ಖಾದಿ ರಮೇಶ್, ಜ್ಞಾನೇಶ್, ಹರೀಶ್, ಜಿ.ದಾದಾಪೀರ್ ಇತರರಿದ್ದರು.