

ಸರಗೂರು: ಅಧಿಕಾರಿಗಳು ಇಲಾಖೆಯ ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಬಂದಲ್ಲಿ ಸಮಸ್ಯೆ ಬಗೆಹರಿಸಲು ಸಾಧ್ಯ. ಆದರೆ ಅಪೂರ್ಣ ಮಾಹಿತಿಯೊಂದಿಗೆ ಬಂದರೆ ಸಭೆ ಮಾಡುವುದಾದರೂ ಹೇಗೆ ಎಂದು ಶಾಸಕ ಅನಿಲ್ ಚಿಕ್ಕಮಾದು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಸರ್ಕಾರಿ, ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕು ಪತ್ರ ನೀಡಬೇಕೆಂದರೆ ಜಮೀನಿಗೆ ಸಂಬಂಧಿಸಿದ ಕಡತಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ತಯಾರಿಸಿ ಸೂಕ್ತ ಕಡತದೊಂದಿಗೆ ಬಂದರೆ ಸಾಗುವಳಿ ನೀಡಲು ಸಾಧ್ಯ. ಆದರೆ ಅಧಿಕಾರಿಗಳು ಅಪೂರ್ಣ ದಾಖಲೆಗಳೊಂದಿಗೆ ಸಭೆಗೆ ಬಂದರೆ ರೈತರಿಗೆ ಯಾವ ರೀತಿ ಅನುಕೂಲ ಮಾಡಲು ಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರದ ಮಾರ್ಗಸೂಚಿ ಪ್ರಕಾರ ಕ್ಷೇತ್ರದಲ್ಲಿ ಸಾವಿರಕ್ಕೂ ಹೆಚ್ಚು ರೈತರಿಗೆ ವಿತರಣೆ ಮಾಡಿದ್ದೇನೆ. ಆದರೂ ಇನ್ನೂ ಸಾಕಷ್ಟು ಅರ್ಜಿಗಳು ಬಾಕಿ ಇದ್ದು, ಇದಕ್ಕೆ ಕಾರಣ ನೀಡುವಂತೆ ಸೂಚಿಸಿದರು.
ರೈತರಿಂದ ಹಣ ಕಟ್ಟಿಸಿಕೊಂಡರೂ ಹಕ್ಕು ಪತ್ರ ವಿತರಣೆ ನೀಡುತ್ತಿಲ್ಲ ಎಂದು ಮಾಹಿತಿ ಬಂದಿದೆ. ಯಾಕೆ ವಿಲೇವಾರಿ ಮಾಡುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ. ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮಲೆಕ್ಕಿಗರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆಯೇ ಎಂದು ತಹಸೀಲ್ದಾರ್ ಅವರನ್ನು ಪ್ರಶ್ನಿಸಿದರು. ರೈತರು ಸಾಗುವಳಿ ಪತ್ರಕ್ಕೆ ಅರ್ಜಿಯನ್ನು ನೀಡಿದ್ದಾರೆ. ಆದರೆ ನೀವುಗಳು ಏನೂ ಮಾಡುತ್ತಿದ್ದೀರಿ. ನಾವುಗಳು ಕಮಿಟಿಯಲ್ಲಿ ಸಾಗುವಳಿ ಪತ್ರ ಮಂಜೂರಾತಿ ಮಾಡಿದ್ದರು ಸಹ ನೀವುಗಳು ಯಾಕೆ ವಿತರಣೆ ಮಾಡಿಲ್ಲ ಎಂಬ ಬಗ್ಗೆ ಉತ್ತರ ನೀಡುವಂತೆ ತಿಳಿಸಿದರು.
ಯಾವುದೇ ವಿಷಯವನ್ನು ನಾನು ಕೇಳಿದರೂ ಅರಣ್ಯ ಇಲಾಖೆಗೆ ಸೇರಿದೆ ಎಂದು ಒಂದೇ ಉತ್ತರ ಕೊಡುತ್ತಿದ್ದೀರಾ. ಯಾಕೆ, ಏನು ಅಂತ ನನಗೆ ಗೊತ್ತಾಗುತ್ತಿಲ್ಲ. ಅಧಿಕಾರಿಗಳು ಈ ರೀತಿ ಉತ್ತರ ಕೊಟ್ಟರೆ ಸರ್ಕಾರ ಯಾಕೆ ಕಮಿಟಿ ಮಾಡಬೇಕು. ಎಲ್ಲವನ್ನು ನೀವೇ ಮಾಡಿಸಿಕೊಂಡರೆ ನಮಗೆ ಯಾಕೆ ಹೇಳುತ್ತೀರಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಷ್ಟು ಜನರಿಗೆ ಖಾತೆ ಹಾಗೂ ಪೋಡಿ ಮಾಡಿದ್ದೀರಾ, ಇನ್ನೂ ಎಷ್ಟು ಜನರಿಗೆ ಮಾಡಬೇಕು ಹೇಳಿ ಎಂದು ಪಟ್ಟು ಹಿಡಿದರು. ನಾವು ಸಾರ್ವಜನಿಕರಿಗೆ ಯಾವ ಉತ್ತರ ನೀಡಬೇಕು ಹೇಳಿ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಅಧಿಕಾರಿಗಳು ಯಾವುದೇ ಕೂಡಾ ಉತ್ತರ ನೀಡಿದೆ ಮೌನವಾಗಿದ್ದರು. ಮುಂದಿನ ಸಭೆಯಲ್ಲಿ ಸರಿಯಾದ ಮಾಹಿತಿ ನೀಡದಿದ್ದರೆ ಸೂಕ್ತ ಕ್ರಮ ವಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಕ್ರಮ ಅಕ್ರಮ ಸಮಿತಿ ಸದಸ್ಯರಾದ ಪ್ರಭುಸ್ವಾಮಿ, ಶಿವಶಂಕರ್, ಯಶೋಧಾ, ತಹಸೀಲ್ದಾರ್ ರುಕೀಯಾ ಬೇಗಂ, ಉಪತಹಸೀಲ್ದಾರ್ ಸುನೀಲ್, ರವಿಂದ್ರ, ರಾಜಸ್ವ ನಿರೀಕ್ಷಕ ಮುಜೀಬ್, ಶ್ರೀನಿವಾಸ, ಗೋಪಾಲ್, ನೂರುಲ್ಲಾ, ಶಾಸಕರ ಕಾರ್ಯದರ್ಶಿ ಮಂಜುನಾಥ್, ಸುದರ್ಶನ್, ರಘು ಇದ್ದರು.