ಪತ್ರಕರ್ತರ ಸೇವಾ ಮನೋಭಾವ ಶ್ಲಾಘನೀಯ

HUN-JULY-1-1{PATRIKA DINACHARANE AT HUNSUR}
ಹುಣಸೂರು ನಗರದ ರೋಟರಿ ಭವನದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಶಾಸಕರಾದ ಜಿ.ಟಿ.ದೇವೇಗೌಡ, ಜಿ.ಡಿ.ಹರೀಶ್‌ಗೌಡ, ಧರ್ಮಾಪುರ ನಾರಾಯಣ್, ಎಸ್.ಟಿ.ರವಿಕುಮಾರ್, ಎಚ್.ಆರ್.ಕೃಷ್ಣಕುಮಾರ್ ಇದ್ದರು.
Published on

ಹುಣಸೂರು: ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಮಹತ್ಕಾರ್ದಲ್ಲಿ ಪಾಲ್ಗೊಂಡಿರುವ ಪತ್ರಕರ್ತರ ಸೇವಾ ಮನೋಭಾವ ಶ್ಲಾಘನೀಯ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.

ಪತ್ರಕರ್ತರ ದಿನಾಚರಣೆ ಅಂಗವಾಗಿ ನಗರದ ರೋಟರಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದರು. ು ತಾಲೂಕಿನಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕಾಗಿ ದಶಕಗಳಿಂದ ಒತ್ತಾಯ ಕೇಳಿಬಂದಿದೆ. ಭವನ ನಿರ್ಮಾಣಕ್ಕಾಗಿ ನಿವೇಶನವನ್ನು ಈಗಾಗಲೇ ಗುರುತಿಸಿದ್ದು, ಮುಂದಿನ ಕ್ರಮ ವಹಿಸಲಾಗುವುದು. ಅಲ್ಲದೆ ಪತ್ರಕರ್ತರ ಸಹಕಾರ ಸಂಘವನ್ನೂ ಸ್ಥಾಪಿಸಲು ನೆರವು ಕೋರಿದ್ದು, ಅದನ್ನೂ ನಿರ್ವಹಿಸಲಾಗುವುದು ಎಂದು ಭರವಸೆ ನೀಡಿದರು.

ರಾಜಕಾರಣದ ವಿಶ್ಲೇಷಣೆ ಯಾಕಿಲ್ಲ?: ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಪತ್ರಿಕಾರಂಗ ಇಂದಿಗೂ ಜನರ ವಿಶ್ವಾಸವನ್ನು ಉಳಿಸಿಕೊಂಡಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ರಾಜಕಾರಣದ ವಿಶ್ಲೇಷಣೆಯನ್ನು ಪತ್ರಿಕೆಗಳು ಮಾಡದಿರುವುದು ನೋವು ತಂದಿದೆ. 2019ರ ಸಮ್ಮಿಶ್ರ ಸರ್ಕಾರವನ್ನು ನಾವು ಕೆಡಿವಿದ್ದು ಏಕೆ? ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆದದ್ದು, ಅವರನ್ನು ಸ್ಥಾನವಂಚಿತರನ್ನಾಗಿಸಿದ್ದು, ಬೊಮ್ಮಾಯಿ ಮುಖ್ಯಮಂತ್ರಿಯಾದದ್ದು ಹೇಗೆ ಎಂಬ ವಿಚಾರಗಳನ್ನು ಪತ್ರಿಕಾ ಮಾಧ್ಯಮ ವಿಶ್ಲೇಷಿಸಲಿಲ್ಲ ಎಂದರು.

ಹೊಸ ಶಾಸಕರ ತರಬೇತಿ ಶಿಬಿರದಲ್ಲಿ ನಾನು ಮಾತನಾಡಲಿದ್ದೇನೆ ಎಂದು ತಿಳಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷಾಂತರ ಹೇಗೆ ಮಾಡುವುದು ಎನ್ನುವುದನ್ನು ತಿಳಿಸಲಿದ್ದಾರೆಯೇ ಎಂದು ಟ್ರೋಲ್ ಮಾಡಿದರು. ವಿಶ್ವನಾಥ್ ಏಕೆ ಪಕ್ಷಾಂತರ ಮಾಡಿದರು ಎನ್ನುವುದನ್ನು ಯಾರೂ ಪ್ರಶ್ನಿಸುತ್ತಿಲ್ಲ. ಇಂತಹ ಬೆಳವಣಿಗೆ ವಿಷಾದನೀಯ ಎಂದರು.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಇಂದಿನ ಯುವಸಮೂಹ ವಿವಿಧ ಸಾಮಾಜಿಕ ಜಾಲತಾಣಗಳನ್ನು ನೆಚ್ಚಿಕೊಂಡಿರಬಹುದು. ಆದರೆ ಹಿರಿಯರು ಮಾತ್ರ ಇಂದಿಗೂ ಪತ್ರಿಕೆಯನ್ನು ಅವಲಂಬಿಸಿದ್ದಾರೆ. ಪತ್ರಿಕೆ ತನ್ನ ವಿಶ್ವಾಸಾರ್ಹತೆಯನ್ನು ಇಂದಿಗೂ ಉಳಿಸಿಕೊಂಡಿದೆ ಎಂದರು.

ಪತ್ರಕರ್ತ ಕೆ.ದೀಪಕ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಗ್ರಾಮಾಂತರ ಉಪಾಧ್ಯಕ್ಷ ಧರ್ಮಾಪುರ ನಾರಾಯಣ್, ಮಾತನಾಡಿದರು. ತಾಲೂಕು ಅಧ್ಯಕ್ಷ ಎಚ್.ಆರ್.ಕೃಷ್ಣಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗ್ರಾಮೀಣ ಅಭಿವೃದ್ಧಿ ಕುರಿತಾಗಿನ ಉತ್ತಮ ಲೇಖನಕ್ಕಾಗಿ ಕೊಡಮಾಡುವ ಎಚ್.ಆರ್.ಶ್ರೀನಿವಾಸ್ ಪ್ರಶಸ್ತಿ ಪುರಸ್ಕೃತ ಎಚ್.ಎಸ್.ಗಜೇಂದ್ರ, ಹಿರಿಯ ಪತ್ರಕರ್ತರಾದ ಸಂಪತ್‌ಕುಮಾರ್, ಶಿವಕುಮಾರ್.ವಿ.ರಾವ್, ದಾ.ರಾ.ಮಹೇಶ್ ಮತ್ತು ಅರುಣ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಪತ್ರಕರ್ತರ ಕುಟುಂಬಕ್ಕೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಿಗೆ, ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ಮತ್ತು ಚರ್ಚಾಸ್ಪರ್ಧೆ ವಿಜೇತರಿಗೆ ಹಾಗೂ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಗಣ್ಯರು ವಿತರಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಮಾಡಿದ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸರ್ವೇಶ್ ರಾಜೇ ಅರಸ್‌ಗೆ ಸೇವಾ ಚೇತನ ಪ್ರಶಸ್ತಿ, ಬಾಲಕಿಯರ ಪಿಯ ಕಾಲೇಜಿನ ಪ್ರಾಧ್ಯಾಪಕ ಎಚ್.ಎನ್.ಗಿರೀಶ್‌ಗೆ ವಿದ್ಯಾಶಿಕ್ಷಕ ಪ್ರಶಸ್ತಿ ಮತ್ತು ಯುವರೈತ ಶಿರಿಯೂರ ಜಗದೀಶ್‌ಗೆ ಸಂಘದ ವತಿಯಿಂದ ಭೂಮಿಪುತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net