ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ

Crime Logo
Published on

ಚಾಕುವಿನಿಂದ ಪತ್ನಿಯನ್ನು ಇರಿದು ಕೊಂದ ಪತಿ ಪೊಲೀಸರಿಗೆ ಶರಣಾಗಿದ್ದಾನೆ.

ಲಕ್ಷ್ಮೀಕಾಂತ ನಗರದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಹೂಟಗಳ್ಳಿ ನಿವಾಸಿ ಶ್ರುತಿ(30) ಕೊಲೆಯಾದ ಮಹಿಳೆ.

ಚಾಮರಾಜನಗರ ಜಿಲ್ಲೆ ಬಾಗಳಿ ಗ್ರಾಮದ ನಿವಾಸಿ ಎನ್.ಮನು(31) ಹಲ್ಲೆ ನಡೆಸಿ ಕೊಲೆಗೈದ ಆರೋಪಿ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಏನಿದು ಪ್ರಕರಣ?: ಟೈಲ್ಸ್ ಮಾರಾಟ ಮಳಿಗೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮನು ಹಾಗೂ ಶ್ರುತಿ 5 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಆದರೆ ಮನು ಅವರ ಪಾಲಕರು ಮದುವೆಯನ್ನು ಒಪ್ಪಿರಲಿಲ್ಲ. ಇದರಿಂದ ಸಾಕಷ್ಟು ಗಲಾಟೆ ನಡೆದು ಮನು ಶ್ರುತಿಯನ್ನು ತೊರೆದಿದ್ದ. ಈ ಬಗ್ಗೆ ಶ್ರುತಿ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಅಲ್ಲಿ ರಾಜೀ ಪಂಚಾಯಿತಿ ಮಾಡಿಕೊಂಡು ಪತ್ನಿಯೊಂದಿಗೆ ಬಾಳುವುದಾಗಿ ಹೇಳಿ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಿದ್ದ.

ನಂತರ ಆತ ಲಕ್ಷ್ಮೀಕಾಂತನಗರದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ಒಟ್ಟಿಗೆ ವಾಸಿಸುತ್ತಿದ್ದರು. ಆದರೆ, ಇಬ್ಬರ ನಡುವಿನ ವೈಮನಸ್ಸು ಮಾತ್ರ ಮುಂದುವರಿದಿತ್ತು. ಅದರಂತೆ ಬುಧವಾರ ಮುಂಜಾನೆ ಇಬ್ಬರ ನಡುವೆ ಜಗಳ ಆರಂಭವಾಗಿದೆ. ನಂತರ ಆತ ಚಾಕುವನ್ನು ತಂದು ಪತ್ನಿಯ ಮೇಲೆ ಕುತ್ತಿಗೆ ಸೇರಿದಂತೆ ದೇಹದ ಹಲವೆಡೆ ಮನಸೋಇಚ್ಛೆ ಇರಿದಿದ್ದಾನೆ. ಇದರಿಂದಾಗಿ ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ಮೃತಳ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಮೇರೆಗೆ ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net