

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ, ಪತ್ನಿಯ ಕೈ ಕೊಯ್ದು ಕೊಲೆ ಮಾಡಲು ಯತ್ನಿಸಿದ್ದಾನೆ.
ಜರಗನಹಳ್ಳಿಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಪುಟ್ಟೇನಹಳ್ಳಿ ಠಾಣೆ ಪೊಲೀಸರು ಆರೋಪಿ ರಾಮುನನ್ನು ಬಂಧಿಸಿದ್ದಾರೆ.
ಖಾಸಗಿ ಕಂಪನಿ ಉದ್ಯೋಗಿಯಾದ ರಾಮು, ಐದು ವರ್ಷಗಳ ಹಿಂದೆ ನೇತ್ರಾ ಎಂಬುವರನ್ನು ಮದುವೆಯಾಗಿದ್ದ. ನೇತ್ರಾ ದಂಪತಿಗೆ ಒಂದು ಗಂಡು ಮಗುವಿದೆ. ಮದ್ಯವ್ಯಸನಿಯಾದ ಈತ ಕೆಲ ತಿಂಗಳುಗಳ ಹಿಂದೆ ಕೆಲಸ ಬಿಟ್ಟಿದ್ದ. ಈ ವಿಚಾರಕ್ಕೆ ದಂಪತಿ ಮಧ್ಯೆ ಆಗಾಗ್ಗೆ ಜಗಳವಾಗುತ್ತಿತ್ತು. ಅದೇ ರೀತಿ ಶನಿವಾರ ರಾತ್ರಿ ಸಹ ಜಗಳವಾಗಿದೆ. ಆಗ ಮದ್ಯಪಾನ ಮಾಡಿದ್ದ ರಾಮು, ಮನೆಯಲ್ಲಿದ್ದ ಚಾಕುವಿನಿಂದ ಪತ್ನಿಯ ಕೈ ಕೊಯ್ದು ಕೊಲೆ ಮಾಡಲು ಯತ್ನಿಸಿದ್ದಾನೆ. ನೇತ್ರಾ ಅವರ ಚೀರಾಟ ಕೇಳಿದ ನೆರೆಹೊರೆಯವರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನೇತ್ರಾ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಲೆ ಯತ್ನ ಆರೋಪದಡಿ ರಾಮುನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.