

ಆಲ್ದೂರು: ಪತ್ನಿಯನ್ನು ಕೊಲೆ ಮಾಡಿದ್ದ ಪತಿ ಪೊಲೀಸರಿಗೆ ಶರಣಾಗಿದ್ದು, ಆಲ್ದೂರು ಪೊಲೀಸರು ಸ್ಥಳ ಮಹಜರು ನಡೆಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೂಡಿಗೆರೆ ರಸ್ತೆಯ ಹವ್ವಳ್ಳಿ ಗ್ರಾಮದ ವಾಸಿ ನೇತ್ರಾವತಿಯನ್ನು ಪತಿ ನವೀನ್ ಕಳೆದ 15 ದಿನಗಳ ಹಿಂದೆ ಬರ್ಬರವಾಗಿ ಕತ್ತು ಸೀಳಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ನೇತ್ರಾವತಿ ವಾಸವಿದ್ದ ಮನೆ ಹಿಂಭಾಗದ ಹಿತ್ತಲಿನಲ್ಲಿ ರಾತ್ರಿ ವೇಳೆ ನವೀನ್ ಕಾದು ಕುಳಿತು ನೇತ್ರಾವತಿ ಮನೆ ಹೊರಭಾಗದಲ್ಲಿರುವ ಶೌಚಗೃಹಕ್ಕೆ ಬಂದ ಸಂದರ್ಭದಲ್ಲಿ ಕತ್ತಿಯಿಂದ ಕುತ್ತಿಗೆ ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು.
ನವೀನ್ ಹಾಗೂ ಅವರ ತಂದೆ ಮಂಜೇಗೌಡ, ತಾಯಿ ವಿರುದ್ಧ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ನೇತ್ರಾವತಿ ಅವರ ತಾಯಿ ಶುಭಾ ಆಲ್ದೂರು ಠಾಣೆಗೆ ದೂರು ನೀಡಿದ್ದರು. ನವೀನ್ ಕೊಲೆಗೆ ಬಳಸಿದ್ದ ಕತ್ತಿಯನ್ನು ಪಟ್ಟಣದ ಬೀರಂಜಿ ಹಳ್ಳದ ಬಳಿ ಎಸೆದು ಹೋಗಿದ್ದು ಸ್ಥಳ ಮಹಜರು ನಡೆಸಿ ಕತ್ತಿಯನ್ನು ವಶಕ್ಕೆ ಪಡೆಯಲಾಯಿತು. ಮಂಜೇಗೌಡ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಆಲ್ದೂರು ವೃತ್ತ ನಿರೀಕ್ಷಕ ಸೋಮೇಗೌಡ, ಠಾಣಾಧಿಕಾರಿ ರವಿ ಹಾಗೂ ಸಿಬ್ಬಂದಿ ಸ್ಥಳ ಮಹಜರು ಸಂದರ್ಭದಲ್ಲಿ ಇದ್ದರು.