ಪತಿಯಿಂದಲೇ ಪತ್ನಿ ಬರ್ಬರ ಕೊಲೆ

13ald1 crime
ನೇತ್ರಾವತಿ
Published on

ಆಲ್ದೂರು: ಪಟ್ಟಣದ ಮೂಡಿಗೆರೆ ರಸ್ತೆಯ ಹವ್ವಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಪತ್ನಿಯನ್ನೇ ಪತಿ ಬರ್ಬರವಾಗಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

ಹೊಸಳ್ಳಿ ಗ್ರಾಮದ ನೇತ್ರಾವತಿ (32) ಕೊಲೆಯಾದ ದುರ್ದೈವಿ. ಮಾಸರವಳ್ಳಿ ಗ್ರಾಮದ ನವೀನ್ ಕೊಲೆಗೈದ ಆರೋಪಿ. ನೇತ್ರಾವತಿಯನ್ನು ಕಳೆದ 6 ತಿಂಗಳ ಹಿಂದೆ ಸಕಲೇಶಪುರ ಸಮೀಪದ ಮಾಸರವಳ್ಳಿ ಗ್ರಾಮದ ನವೀನ್ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು. ನೇತ್ರಾವತಿ 2 ತಿಂಗಳ ಹಿಂದೆ ಗಂಡನನ್ನು ಬಿಟ್ಟು ತವರು ಮನೆಗೆ ಬಂದು ಟೈಲರಿಂಗ್ ಕೆಲಸ ಮಾಡಿಕೊಂಡು ಬೇರೆ ವಾಸವಿದ್ದರು. ನನಗೆ ದೈಹಿಕ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾನೆ ಎಂದು ಗಂಡನ ಮೇಲೆ ಆಲ್ದೂರು ಠಾಣೆಗೆ ದೂರು ನೀಡಿದ್ದಳು. ಠಾಣೆಯಲ್ಲಿ ಇಬ್ಬರನ್ನು ಕರೆದು ವಿಚಾರಣೆ ಮಾಡಿ ಕಳುಹಿಸಲಾಗಿತ್ತು.

ಭಾನುವಾರ ರಾತ್ರಿ ನವೀನ್, ನೇತ್ರಾವತಿ ವಾಸವಿದ್ದ ಮನೆ ಹಿಂಭಾಗದ ಹಿತ್ತಲಿನಲ್ಲಿ ಕಾದು ಕುಳಿತು ನೇತ್ರಾವತಿ ಮನೆಯಿಂದ ಹೊರಭಾಗದಲ್ಲಿರುವ ಶೌಚಗೃಹಕ್ಕೆ ಬಂದ ಸಂದರ್ಭದಲ್ಲಿ ಕತ್ತಿಯಿಂದ ಕುತ್ತಿಗೆ ಕೊಯ್ದು ಪರಾರಿಯಾಗಿದ್ದಾನೆ. ನೇತ್ರಾವತಿ ಜೋರಾಗಿ ಕಿರುಚಾಡಿದ ಶಬ್ದ ಕೇಳಿ ಅವರ ತಂದೆ, ತಾಯಿ ಬಂದು ನೋಡುವಷ್ಟರಲ್ಲಿ ನೇತ್ರಾವತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಇವರ ಮನೆ ಪಕ್ಕದಲ್ಲೇ ಪೊಲೀಸರು ವಾಸವಿದ್ದು ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಬಂದು ಪೊಲೀಸ್ ಜೀಪ್‌ನಲ್ಲಿ ಚಿಕ್ಕಮಗಳೂರಿಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸೋಮವಾರ ಚಿಕ್ಕಮಗಳೂರು ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ನವೀನ್ ವಿರುದ್ಧ ನೇತ್ರಾವತಿ ಅವರ ತಾಯಿಠಾಣೆಗೆ ದೂರು ನೀಡಿದ್ದಾರೆ. ಆರೋಪಿ ನವೀನ್ ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ವೃತ್ತ ನಿರೀಕ್ಷಕ ಸೋಮೇಗೌಡ, ಡಿವೈಎಸ್ಪಿ ಶೈಲೇಂದ್ರ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net