ಪತ್ನಿ ಶೀಲ ಶಂಕಿಸಿ ಪ್ರಿಯಕರನ ಹತ್ಯೆಗೈದ ಪತಿ

crime_collage
Published on

ನಂಜನಗೂಡು: ಪತ್ನಿ ಜತೆಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಮಹಿಳೆಯ ಪತಿ ಆಕೆಯ ಪ್ರಿಯಕರನನ್ನು ಮಚ್ಚಿನಿಂದ ಗಂಭೀರವಾಗಿ ಹಲ್ಲೆ ಮಾಡಿದ್ದು ಚಿಕಿತ್ಸೆಗೆ ಸ್ಪಂದಿಸದೆ ಗಾಯಾಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ತಾಲೂಕಿನ ಹೊಸಹಳ್ಳಿ ನಿವಾಸಿ ಮಹದೇವಸ್ವಾಮಿ (39) ಕೊಲೆಯಾದವನು. ಈತನ ಮೇಲೆ ಇದೇ ಗ್ರಾಮದ ನಿವಾಸಿ ಸೋಮಯ್ಯ ಎಂಬಾತ ಮಚ್ಚಿನಿಂದ ದಾಳಿ ಮಾಡಿದ್ದ. ಶನಿವಾರ ಮಧ್ಯಾಹ್ನ ಗ್ರಾಮದ ಚಾವಡಿ ಸಮೀಪ ಮಲಗಿದ್ದ ಮಹದೇವಸ್ವಾಮಿ ಮೇಲೆ ಮುಗಿಬಿದ್ದ ಸೋಮಯ್ಯ ತನ್ನ ಪತ್ನಿ ಜತೆ ನೀನು ಅಕ್ರಮ ಸಂಬಂಧ ಹೊಂದಿದ್ದೀಯ. ನಿನ್ನನ್ನು ಉಳಿಸುವುದಿಲ್ಲ ಎಂದು ಹೇಳಿ ತಗಾದೆ ತೆಗೆದು ಮಚ್ಚಿನಿಂದ ಗಂಭೀರವಾಗಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಮಹದೇವಸ್ವಾಮಿ ಮಾವ ರವಿ ಎಂಬುವರು ಸ್ಥಳಕ್ಕಾಗಮಿಸಿ ರಕ್ತಸಿಕ್ತವಾಗಿ ಬಿದ್ದಿದ್ದ ಮಹದೇವಸ್ವಾಮಿಯನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ. ಅನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರಾದರೂ ಭಾನುವಾರ ಮುಂಜಾನೆ ಗಾಯಾಳು ಮಹದೇವಸ್ವಾಮಿ ಮೃತಪಟ್ಟಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

ಸ್ಥಳಕ್ಕೆ ಡಿವೈಎಸ್‌ಪಿ ಗೋವಿಂದರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿಯ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net