

ಚಾಮರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ 22ರ ವ್ಯಾಪ್ತಿಯ ಪಡುವಾರಹಳ್ಳಿಯಲ್ಲಿ ಸೋಮವಾರ ಶಾಸಕ ಕೆ.ಹರೀಶ್‌ಗೌಡ ಪಾದಯಾತ್ರೆ ನಡೆಸುವ ಮೂಲಕ ಸಾರ್ವಜನಿಕರ ಸಮಸ್ಯೆ ಆಲಿಸಿದರು.
ಪಾಲಿಕೆಯ ಎಲ್ಲ ಅಧಿಕಾರಿಗಳೊಂದಿಗೆ ಮನೆ ಬಾಗಿಲಿಗೆ ತೆರಳಿ ಜನ ಸಮಸ್ಯೆ ಆಲಿಸಿದರು. ಜತೆಗೆ ಆ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೆ.ಹರೀಶ್‌ಗೌಡ, ನಮ್ಮ ಕ್ಷೇತ್ರದ ಪ್ರತಿ ಪ್ರದೇಶಕ್ಕೂ ಖುದ್ದು ಅಧಿಕಾರಿಗಳೊಂದಿಗೆ ಭೇಟಿ ನೀಡುತ್ತಿದ್ದೇನೆ. ಈ ವೇಳೆ ಹಲವಾರು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುತ್ತಿದೇವೆ. ಭವಿಷ್ಯದಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕೆಲಸಗಳನ್ನು ಸ್ಥಳದಲ್ಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸುತ್ತಿದ್ದೇನೆ. ಇದರಿಂದ ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡಬಹುದಾಗಿದೆ ಎಂದರು.
ಸದ್ಯ ಪಡುವಾರಹಳ್ಳಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಶಾಸಕನಾದ ಮೇಲೆ ಗ್ರಾಮದ ಹಲವೆಡೆ ಒಳಚರಂಡಿ, ರಸ್ತೆ ಹಾಗೂ ಮಳೆ ನೀರು ಚರಂಡಿ ಕಾಮಗಾರಿಗಳು ಮಾಡಿಸಿದ್ದೇನೆ. ಉಳಿದ ಕೆಲವು ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಅಂದಾಜು 5 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ , ಮಳೆ ನೀರು ಮೋರಿ, ಕಾಂಕ್ರೀಟ್ ರಸ್ತೆ ಮಾಡಿಸಿ ಶಾಶ್ವತವಾಗಿ ಸಮಸ್ಯೆಗಳು ಬರದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.
ಇದೇ ವೇಳೆ ಪಡುವಾರಹಳ್ಳಿ ನಿವಾಸಿಗಳು ಮಹಾರಾಣಿ ಕಾಲೇಜಿನ ಮಧ್ಯೆ ಇರುವ ರಸ್ತೆಗೆ ಸ್ವಾಗತ ಕಮಾನು ಹಾಕಿಸಿಕೊಡಬೇಕೆಂದು ಮನವಿ ಮಾಡಿದರು. ಪಾದಯಾತ್ರೆಯ ನಂತರ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಜನಸಂಪರ್ಕ ಸಭೆ ನಡೆಸಿ ಬಂದ ಅಲ್ಪ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಶೀಘ್ರವಾಗಿ ಬಗೆಹರಿಸುವಂತೆ ಸೂಚಿಸಿದರು.
ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ಕುಮಾರ್, ಮುಖಂಡರಾದ ಜೆ.ಯೋಗೇಶ್, ಮರಿಸ್ವಾಮಿ, ಕೃಷ್ಣ, ಪಾಪಣ್ಣ, ರಾಮಚಂದ್ರ, ಮಹದೇಶ್, ಭೀಮಣ್ಣ, ಕೃಪಾನಂದ, ರಾಜಣ್ಣ, ನಿತಿನ್, ರಾಜೇಶ್ವರಿ ಪುಟ್ಟಸ್ವಾಮಿ ಇತರರಿದ್ದರು.