

ಮಕ್ಕಳನ್ನು ಸರಿದಾರಿಯಲ್ಲಿ ಬೆಳೆಸಲು ಶಿಕ್ಷಕರಷ್ಟೇ ಪೋಷಕರ ಪಾತ್ರವೂ ಮುಖ್ಯ ಎಂದು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೃಷ್ಣಮೂರ್ತಿಪುರಂ ನಮನ ಕಲಾಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಿದರೆ ಮುಗಿಯಿತು ಎಂದು ಭಾವಿಸುತ್ತಾರೆ. ಶಿಕ್ಷಕರು ಪಾಠ ಹೇಳಿಕೊಡುತ್ತಾರೆ. ಆದರೆ ಅವರಿಗೆ ಮನೆಯಿಂದಲೇ ಉತ್ತಮ ಸಂಸ್ಕಾರ ಕಲಿಸಬೇಕು. ಇದು ಪೋಷಕರ ಜವಾಬ್ದಾರಿ ಎಂದರು.
ಭಾರತದ ಮಕ್ಕಳಲ್ಲಿ ಐಕ್ಯೂ ಹೆಚ್ಚಿದೆ. ಇದರಿಂದ ಚೆನ್ನಾಗಿ ವಿದ್ಯಾಭ್ಯಾಸ ಮಾಡಿದರೆ ಪ್ರಪಂಚದ ಯಾವುದೇ ದೇಶದಲ್ಲಿ ಬೇಕಾದರೂ ಉದ್ಯೋಗ ಪಡೆಯಬಹುದು. ಆದ್ದರಿಂದ ಚೆನ್ನಾಗಿ ಓದಬೇಕು ಎಂದರು. ಕೇವಲ ಪಠ್ಯದಿಂದ ಮಕ್ಕಳ ಸಂಪೂರ್ಣ ವ್ಯಕ್ತಿತ್ವ ವಿಕಸನ ಆಗುವುದಿಲ್ಲ. ಆದ್ದರಿಂದ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಬೇಕು ಎಂದರು.
ಆಧ್ಯಾತ್ಮಿಕ ಚಿಂತಕಿ ಸುಶೀಲಾ ಶ್ಯಾಮಸುಂದರ್ ಅಧ್ಯಕ್ಷತೆ ವಹಿಸಿದ್ದರು. ಕಥೆ, ಮಾತು- ಹಾಡಿನ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಸನ ಕುರಿತು ಆಕಾಶವಾಣಿ ನಿವೃತ್ತ ಕಾರ್ಯಕ್ರಮಾಧಿಕಾರಿ ಎನ್.ವಿ. ರಮೇಶ್ ಉಪನ್ಯಾಸ ನೀಡಿದರು. ಕೆಜಿಐಡಿ ನಿವೃತ್ತ ವಿಮಾ ಅಧಿಕಾರಿ ಎಚ್.ಸಿ. ಶಕುಂತಲಾ ಮುಖ್ಯ ಅತಿಥಿಯಾಗಿದ್ದರು. ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ. ಶಿವಸ್ವಾಮಿ ಪ್ರಾಸ್ತಾವಿಕ ಭಾಷಣ ಮಾತನಾಡಿದರು. ತೇಜಾವತಿ ಜಯರಾಂ ಪ್ರಾರ್ಥಿಸಿದರು. ಕೆ. ಕಮಲಾ ವಂದಿಸಿದರು. ಸುಮಾ ಪಂಚವಳ್ಳಿ ನಿರೂಪಿಸಿದರು.
ಇದೇ ವೇಳೆ ಚೆನ್ನೈ ಬಳಿ ಇತ್ತೀಚೆಗೆ ನಡೆದ ಅಪಘಾತದಲ್ಲಿ 11 ಬೋಗಿಗಳು ಉರುಳಿದರೂ 12ನೇ ಬೋಗಿಯಲ್ಲಿದ್ದು, ಯಾವುದೇ ಗಾಯಗಳಿಲ್ಲದೇ ಪಾರಾದ ಹಾಗೂ ಯಾವುದೇ ಆಘಾತಕ್ಕೆ ಒಳಗಾಗದೇ ಧೈರ್ಯದಿಂದ ಪರಿಸ್ಥಿತಿ ಎದುರಿಸಿದ ಮೈಸೂರಿನ ಮಕ್ಕಳಾದ ನುಸ್ರತ್ ಜರೀನಾ, ಅಬ್ರಹಾಂ ಜಾಹಿ, ಮಿಕಿಯಲ್ ಜೈದಾನ್ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮಕ್ಕಳ ಪರಿಷತ್ ಚಾಮುಂಡೇಶ್ವರಿ ಘಟಕದ ಅಧ್ಯಕ್ಷೆ ಯಶೋದಾ ಅಧಿಕಾರ ಸ್ವೀಕರಿಸಿದರು. ಪರಿಷತ್ ಪದಾಧಿಕಾರಿಗಳಾದ ಕೃಷ್ಣರಾಜ ಕ್ಷೇತ್ರದ ಲೀಲಾವತಿ ಯಾಲಕಯ್ಯ, ಎಚ್.ಡಿ. ಕೋಟೆಯ ಮಣಿಕಂಠ, ಆರ್. ಶಾಂತಕುಮಾರಿ, ಎ. ಶಮಾ, ಆರ್. ರಂಗಸ್ವಾಮಿ ಶಾಂತಾ, ಎಂ.ಎನ್. ಯದುಗಿರಿ ಗೋಪಾಲನ್, ಕೆ. ಕಮಲಾ ಮೊದಲಾದವರು ಇದ್ದರು. ಮಕ್ಕಳಿಂದ ಗೀತಗಾಯನ, ನೃತ್ಯ ಕಾರ್ಯಕ್ರಮಗಳು ಜರುಗಿದವು.