

ತರೀಕೆರೆ: ಜಾನಪದ ಅಲಿಖಿತ ಸಂವಿಧಾನ. ಅದು ಎಂದಿಗೂ ನಶಿಸಲಾರದು ಎಂದು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ. ಎಸ್.ಬಾಲಾಜಿ ಹೇಳಿದರು.
ಅಜ್ಜಂಪುರ ತಾಲೂಕಿನ ಸೊಕ್ಕೆ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಸಹಯೋಗದಲ್ಲಿ ಏರ್ಪಡಿಸಿದ್ದ ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿ ಸಂಸ್ಕೃತಿ ಮೂಲಕ ಜಾನಪದ ಉಗಮವಾಗಿದ್ದರೂ ಅದರ ಬೆಳವಣಿಗೆ ಮಹಿಳೆಯರಿಂದ ಆಗುತ್ತಿದೆ. ಜಾಗತೀಕರಣದಲ್ಲಿ ಮೊಬೈಲ್, ಕಂಪ್ಯೂಟರೀಕರಣ ಅತಿ ವೇಗವಾಗಿ ಬೆಳೆದರೂ ಅದರ ಪರಿಣಾಮ ಜಾನಪದದ ಮೇಲೆ ಬೀರಲಾರದು ಎಂದರು.
ಜಾನಪದ ಕಾಲಕಾಲಕ್ಕೆ ಬದಲಾವಣೆಗೊಳ್ಳುತ್ತಲೇ ಮುಂದುವರಿಯುತ್ತಿದ್ದು ಶಾಲಾ, ಕಾಲೇಜುಗಳ ಪಠ್ಯಕ್ರಮದಲ್ಲಿ ಹೆಚ್ಚು ಜಾನಪದ ಗದ್ಯ, ಪದ್ಯ ಅಳವಡಿಸಬೇಕು. ಇದರಿಂದ ಜಾನಪದದ ಉಳಿವಿಗೆ ಮಾತ್ರವಲ್ಲ, ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಜಿಲ್ಲಾ ಜಾನಪದ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಎಂ.ಎಸ್.ವಿಶಾಲಾಕ್ಷಮ್ಮ ಮಾತನಾಡಿ, ಮಾರ್ಚ್‌ನಲ್ಲಿ ಅಜ್ಜಂಪುರ ತಾಲೂಕಿನ ಗೊಂಡೆದಹಳ್ಳಿ ಗ್ರಾಮದಲ್ಲಿ ಪ್ರಥಮ ಮಹಿಳಾ ಸಮ್ಮೇಳನ ಆಯೋಜಿಸಲಾಗುವುದು. ಸಮ್ಮೇಳನದಲ್ಲಿ ಜಿಲ್ಲಾ ಮಟ್ಟದ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗುವುದು ಎಂದು ತಿಳಿಸಿದರು. ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಚಾರ್ಯ ಶಿವರಾಜ್ ಮಾತನಾಡಿ, ಜಾನಪದ ಎಲ್ಲ ಕಲೆಗಳ ಮೂಲ. ಜನರ ಬಾಯಿಯಿಂದಲೇ ಜನ್ಮ ಪಡೆಯುವ ಕಲೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದರು.
ಸೋಬಾನೆ ಕಲಾವಿದರಾದ ಗಂಗಮ್ಮ, ರಾಜೇಶ್ವರಿ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಜಿಲ್ಲಾ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಗೌರವಾಧ್ಯಕ್ಷೆ ಸವಿತಾ, ತಾಲೂಕು ಅಧ್ಯಕ್ಷೆ ಕೆ.ಸಿ.ವಿಜಯಕುಮಾರಿ, ಕಡೂರು ತಾಲೂಕು ಅಧ್ಯಕ್ಷೆ ಶೋಭಾ, ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆ ಅಧ್ಯಕ್ಷೆ ಕಲ್ಪನಾ, ಕಾರ್ಯದರ್ಶಿ ಆಶಾ ಭೋಸ್ಲೆ ಮತ್ತಿತರರಿದ್ದರು.