ಪಕ್ಕಾಪೋಡಿ ಪ್ರಕರಣ ಇತ್ಯರ್ಥಪಡಿಸಿ

4MDG2 manavi
ಮೂಡಿಗೆರೆಯಲ್ಲಿ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಎಂ.ಮಂಜುನಾಥ ಗೌಡ, ಉದ್ದೇಗೌಡ, ಡಿ.ಆರ್.ಪುಟ್ಟಸ್ವಾಮಿ ರಘು ಇತರರಿದ್ದರು.
Published on

ಮೂಡಿಗೆರೆ: ಬಾಕಿ ಉಳಿಸಿಕೊಂಡಿರುವ ಜಮೀನಿನ ಪಕ್ಕಾಪೋಡಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಬೇಕೆಂದು ಆಗ್ರಹಿಸಿ ಶುಕ್ರವಾರ ರೈತ ಸಂಘದಿಂದ ಪಟ್ಟಣದಲ್ಲಿ ನೇಗಿಲು, ನೊಗ ಹೊತ್ತು ತಮಟೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಸ್.ಅಶ್ವಿನಿ ಅವರಿಗೆ ಮನವಿ ಸಲ್ಲಿಸಲಾಯಿತು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಮಂಜುನಾಥ ಗೌಡ ಮಾತನಾಡಿ, ಜಮೀನುಗಳ ಪಕ್ಕಾಪೋಡಿ ಮಾಡಿ ಕೊಡುವಂತೆ 5 ವರ್ಷದ ಹಿಂದೆ ಸಲ್ಲಿಸಿದ ಅರ್ಜಿಗಳು ಕೂಡ ಇತ್ಯರ್ಥವಾಗಿಲ್ಲ. ಅಧಿಕಾರಿಗಳು ಇಂಥ ಅರ್ಜಿಗಳತ್ತ ಗಮನಹರಿಸುತ್ತಿಲ್ಲ. ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ರಾಜ್ಯದ ಎಲ್ಲ ಗ್ರಾಮಗಳನ್ನು ಪಕ್ಕಾಪೋಡಿಮುಕ್ತ ಗ್ರಾಮಗಳನ್ನಾಗಿ ಮಾಡಲು ಕಂದಾಯ ಸಚಿವರು ಆಸಕ್ತಿ ತೋರಿದ್ದಾರೆ. ಇದಕ್ಕೆ ಪೂರಕವಾಗಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪಕ್ಕಾಪೋಡಿಮುಕ್ತಗೊಳಿಸುವ ಬಗ್ಗೆ 2018ರಲ್ಲಿ ಸರ್ಕಾರ ಹೊರಡಿಸಿದ ಸುತ್ತೋಲೆಯ ಬಗ್ಗೆ ಭೂಮಾಪನ ಅಧಿಕಾರಿಗಳಿಗೆ ಮಾಹಿತಿ ತಲುಪಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ರಾಜ್ಯದಲ್ಲಿ 1 ಲಕ್ಷಕ್ಕೂ ಅಧಿಕ ರೈತರ ಜಮೀನು, ಪಕ್ಕಾಪೋಡಿಯಾಗದೆ ಹಾಗೇ ಉಳಿದಿದೆ. ಸರ್ಕಾರದ ಸುತ್ತೋಲೆಯಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಮೂಲಕ ಪಕ್ಕಾಪೋಡಿಗೆ ಮುಕ್ತಿ ದೊರಕಿಸಬೇಕೆಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಉದ್ದೇಗೌಡ ಮಾತನಾಡಿ, ಮೂಡಿಗೆರೆ ತಾಲೂಕಿನಲ್ಲಿ ರಾಜ್ಯದಲ್ಲಿಯೇ ಹೆಚ್ಚು ಪೋಡಿ ಪ್ರಕರಣಗಳು ಬಾಕಿ ಉಳಿದಿವೆ. ಫಾರ್ಮ್ ನಂ.50 ಮತ್ತು 53ರಲ್ಲಿ ಅರ್ಜಿ ಸಲ್ಲಿಸಿದ ರೈತರ ಜಮೀನಿನ ಪೋಡಿಯನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಬೇಕು. ಆದಿವಾಸಿ ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ರೈತ ಸಂಘದ ತಾಲೂಕು ಅಧ್ಯಕ್ಷ ಡಿ.ಆರ್.ಪುಟ್ಟಸ್ವಾಮಿ ಗೌಡ, ಮುಖಂಡರಾದ ವನಶ್ರೀ ಲಕ್ಷ್ಮಣ ಗೌಡ, ರಘು, ಚಂದ್ರೇಗೌಡ, ಎನ್.ಎಲ್.ಸುಂದರೇಶ್, ರಮೇಶ್ ಗೌಡ, ಮಂಜುನಾಥ್ ಹೊನ್ನೆಕೋಲು, ಮೀನಾಕ್ಷಮ್ಮ, ಶಕುಂತಲಾ, ನಾಗೇಶ್, ಲಕ್ಷ್ಮಣಗೌಡ, ರವಿ, ಐ.ಬಿ.ಗೋಪಾಲಗೌಡ, ರಘು, ಜಯರಾಮಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net