ಪಂಚಾಯ್ತಿ ಚುನಾವಣೆಗೆ ಜೆಡಿಎಸ್ ತಾಲೀಮು

jds
Published on

ಕೋಲಾರ: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಸರ್ಕಾರ ಚಿಂತಿಸಿರುವ ಬೆನ್ನಲ್ಲೇ ಜಿಲ್ಲೆಯ ದಳಪತಿಗಳು ಗೆಲ್ಲುವಿಗೆ ಕಾರ್ಯತಂತ್ರ ಹೆಣೆಯಲು ಮುಂದಾಗಿದ್ದಾರೆ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗೆ ಬೆಂಗಳೂರಿನಲ್ಲಿ ತಮ್ಮನ್ನು ಭೇಟಿಯಾಗಿದ್ದ ಜಿಲ್ಲೆಯ ದಳಪತಿಗಳೊಂದಿಗೆ ಚುನಾವಣೆ ವಿಚಾರವಾಗಿ ಚರ್ಚಿಸಿ ಪಕ್ಷದ ಸಂಘಟನೆ ಜತೆಗೆ ಎಲ್ಲ ಕ್ಷೇತ್ರಗಳಿಗೂ ಸಮರ್ಥರನ್ನು ಅಭ್ಯರ್ಥಿಯನ್ನಾಗಿ ಗುರುತಿಸಿ ಅವರಿಂದ ಪಕ್ಷ ಸಂಘಟನೆ ಮಾಡಿಸಿ ಎಂದು ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಮುಳಬಾಗಿಲು ಕ್ಷೇತ್ರದ ಸಮೃದ್ಧಿ ಮಂಜುನಾಥ್, ಬಂಗಾರಪೇಟೆಯ ಮಲ್ಲೇಶ್‌ಬಾಬು, ಕೋಲಾರದ ರಾಜರಾಜೇಶ್ವರಿ, ಸಿಎಂಆರ್ ಹರೀಶ್, ಕೆಜಿಎಫ್‌ನ ದಯಾನಂದ್‌ಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಸಂಘಟನೆಗೆ ಒತ್ತು ನೀಡಲು ಮುಖಂಡರು ನಿರ್ಧರಿಸಿದ್ದಾರೆ.

ಈಗಾಗಲೆ ಬಂಗಾರಪೇಟೆ, ಶ್ರೀನಿವಾಸಪುರ, ಮುಳಬಾಗಿಲು ಹಾಗೂ ಕೋಲಾರ ತಾಲೂಕಿನಲ್ಲಿ ಸಂಘಟನೆಗೆ ಗಮನ ಹರಿಸಿರುವ ಮುಖಂಡರು, ಮಾಲೂರಿನಲ್ಲಿ ಜಿ.ಇ.ರಾಮೇಗೌಡರಿಗೆ ಜವಾಬ್ದಾರಿ ವಹಿಸಿದ್ದಾರೆ.

ಕೆಜಿಎಫ್‌ನಲ್ಲಿ ಪಕ್ಷ ಸಂಘಟನೆಗೆ ಮುಖಂಡರ ಕೊರತೆ ಇರುವುದರಿಂದ ಬಿಜೆಪಿ, ಕಾಂಗ್ರೆಸ್ ಪ್ರಬಲ ಮುಖಂಡರನ್ನು ಪಕ್ಷಕ್ಕೆ ಸೆಳೆದು ಅಸ್ತಿತ್ವ ಉಳಿಸಿಕೊಳ್ಳಲು ಚಿಂತನೆ ನಡೆದಿದೆ. ರಾಜ್ಯ ಬಜೆಟ್ ಮಂಡನೆ ಬಳಿಕ ಜಿಲ್ಲೆಗೆ ಬರಲು ಕುಮಾರಸ್ವಾಮಿ ಒಪ್ಪಿಗೆ ಸೂಚಿಸಿದ್ದಾರೆ. ಆ ವೇಳೆಗೆ ಸದಸ್ಯತ್ವ ನೋಂದಣಿ ಕಾರ್ಯದ ಪ್ರಗತಿ, ಬಾಕಿ ಉಳಿದಿರುವ ಪದಾಧಿಕಾರಿಗಳ ನೇಮಕ, ಜನಪರ ಹೋರಾಟ, ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಹಮ್ಮಿಕೊಳ್ಳಲು ಪಕ್ಷದ ಕೇಂದ್ರ ಕಚೇರಿಯಿಂದ ಆದೇಶ ಬಂದಿರುವುದರಿಂದ ದಳಪತಿಗಳು ವಾರದಿಂದೀಚೆಗೆ ಸಕ್ರಿಯವಾಗಿದ್ದು, ಕೋಲಾರದಲ್ಲಿ ಪಕ್ಷದ ಕಚೇರಿ ತೆರೆದಿರುವುದಲ್ಲದೆ, ಹೋಬಳಿ ಮಟ್ಟದಲ್ಲಿ ಮುಖಂಡರನ್ನು ಸೇರಿಸಿ ಬೆಂಬಲಕ್ಕಾಗಿ ಮೊರೆ ಹೋಗುತ್ತಿದ್ದಾರೆ.

ಜಿಪಂಗೆ ಯುವಕರು, ಹಿರಿಯರನ್ನು 50-50 ಸೂತ್ರದಡಿ ಅಭ್ಯರ್ಥಿಯನ್ನಾಗಿ ಮಾಡಬೇಕು, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಬೇಕು, ತಾಪಂ ಕ್ಷೇತ್ರಗಳಿಗೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ವಿವಿಧ ಸಮಾಜದ ಸಲಹೆ ಪಡೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಕ್ಷ ಅಧಿಕಾರಕ್ಕೆ ತರಲು ಸಂಘಟಿತ ಪ್ರಯತ್ನ ಮಾಡಬೇಕು, ಇಡೀ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಪ್ರೊಗ್ರೆಸ್ ರಿಪೋರ್ಟ್ ನೀಡಬೇಕು, ನಾನು ಬಂದಾಗ ಖಾಲಿ ಕೈ ತೋರಿದಲ್ಲಿ ಜಿಲ್ಲೆಯ ಹೆಸರನ್ನು ನನ್ನ ಮನಸ್ಸಿನಿಂದ ತೆಗೆದು ಹಾಕುತ್ತೇನೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.

ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ ನನಗೆ ಕೋಲಾರ ದೊಡ್ಡ ತಲೆನೋವಾಗಿದೆ, ಪೈಪೋಟಿ ಇರಬೇಕು, ಆದರೆ ಪಕ್ಷಕ್ಕೆ ಹಾನಿಯಾಗುವ ರೀತಿಯಲ್ಲಿ ಯಾರೊಬ್ಬರೂ ನಡೆದುಕೊಳ್ಳಬೇಡಿ, ವಿಧಾನ ಪರಿಷತ್ ಚುನಾವಣೆಯಲ್ಲಿ ವಕ್ಕಲೇರಿ ರಾಮು ಸೋಲಿಗೆ ಹಣದ ರಾಜಕಾರಣದ ಜತೆಗೆ ಪಕ್ಷ ಸದೃಢವಾಗಿ ಬೆಳೆಸಲು ಇಚ್ಛಾಶಕ್ತಿಯ ಕೊರತೆ ಕಂಡು ಬಂದಿದೆ, ಇನ್ನು ಮುಂದೆ ಈ ರೀತಿ ನಡೆಯಲು ಅವಕಾಶವಿಲ್ಲ, ಜಿಲ್ಲೆ ಜೆಡಿಎಸ್ ಭದ್ರಕೋಟೆ ಎಂಬುದನ್ನು ನಿರೂಪಿಸುವಂತೆ ಸೂಚಿಸಿರುವುದರಿಂದ ದಳಪತಿಗಳು ಜಿಪಂ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹುಡುಕುವ ಪ್ರಕ್ರಿಯೆ ಆರಂಭಿಸಿದ್ದಾರೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ಜೆಡಿಎಸ್ ಬೆಂಬಲಿಸುವ ಲಕ್ಷಾಂತರ ಕಾರ್ಯಕರ್ತರಿದ್ದಾರೆ, ಅಧಿಕಾರ ಇಲ್ಲದ ಕಾರಣ ತಾತ್ಕಾಲಿಕವಾಗಿ ಬೇರೆಡೆ ಚದುರಿದ್ದು ಮತ್ತೆ ಇವರನ್ನು ಪಕ್ಷಕ್ಕೆ ಕರೆತರಲು ಪ್ರಯತ್ನ ನಡೆದಿದೆ, ಕುಮಾರಸ್ವಾಮಿಯ ಕನಸು ಈಡೇರಿಸುವುದು ನಮ್ಮ ಪ್ರಮುಖ ಅಜೆಂಡಾ. ಪಂಚಾಯಿತಿ ಚುನಾವಣೆ ಮಾತ್ರವಲ್ಲ, 6 ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಲಿದ್ದೇವೆ. ಜಿ.ಕೆ.ವೆಂಕಟಶಿವಾರೆಡ್ಡಿ, ಮಾಜಿ ಶಾಸಕ, ಅಧ್ಯಕ್ಷ, ಜೆಡಿಎಸ್, ಕೋಲಾರ ಪಕ್ಷವನ್ನು ಬೇರುಮಟ್ಟದಿಂದ ಬಲಪಡಿಸಲು ದೇವೇಗೌಡರು, ಕುಮಾರಣ್ಣ ಸೂಚಿಸಿದ್ದಾರೆ, ಮಾರ್ಚ್ ಮೊದಲ ವಾರದೊಳಗೆ ಸದಸ್ಯತ್ವ ಅಭಿಮಾನ ಮುಗಿಸಿ ಬಜೆಟ್ ಮಂಡನೆ ಬಳಿಕ ಕಾರ್ಯಕರ್ತರ ಸಮಾವೇಶ ನಡೆಸಲಾಗುವುದು, ಪಂಚಾಯಿತಿ ಹಾಗೂ 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದು ನಮ್ಮ ಮುಂದಿರುವ ದೊಡ್ಡ ಸವಾಲು, ಕಾರ್ಯಕರ್ತರ ಸಹಕಾರದಿಂದ ಗುರಿ ಸಾಧಿಸುತ್ತೇವೆ. ಮಲ್ಲೇಶ್ ಬಾಬು, ಮುಖಂಡ, ಬಂಗಾರಪೇಟೆ ಕ್ಷೇತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net