

ಚಿತ್ರದುರ್ಗ: ಜಲಾನಯನ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಹಿನ್ನೆಲೆಯಲ್ಲಿ ಜಿಲ್ಲೆಯ ಕೃಷಿ ಇಲಾಖೆ ಪಂಚ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಜಲಾನಯನ ಕಾರ್ಯಕ್ರಮಗಳಾದ ಮಣ್ಣು ಮಾದರಿ ಸಂಗ್ರಹ, ವಿಶ್ಲೇಷಣೆ, ಉದ್ಯೋಗಖಾತ್ರಿ ಯೋಜನೆ, ಕೃಷಿಕರಿಗೆ ತರಬೇತಿ ಮತ್ತು ರಾಷ್ಟ್ರೀಯ ಸುಸ್ಥಿರ ಕೃಷಿ ಯೋಜನೆಗಳನ್ನು 2024-25ನೇ ಸಾಲಿನಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಪ್ರಶಸ್ತಿಗಳಿಗೆ ಭಾಜನವಾಗಿದೆ.
ಇಲಾಖೆಯಿಂದ ಕಳೆದ ಏ.16ರಿಂದ ಎರಡು ದಿನಗಳ ಕಾಲ ಬೆಂಗಳೂರಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಮುಂಗಾರು ಹಂಗಾಮು ಕಾರ್ಯಾಗಾರದಲ್ಲಿ ಕೃಷಿ ಸಚಿವರು, ಆಯುಕ್ತರು ಮತ್ತು ಕೃಷಿ ನಿರ್ದೇಶಕರು ಚಿತ್ರದುರ್ಗ ಜಿಲ್ಲೆಗೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದಾರೆ.
ಜಲಾನಯನ ಕಾರ್ಯಕ್ರಮಗಳಡಿ ವಿಶೇಷ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಕ್ಕೆ ಚಿತ್ರದುರ್ಗ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದೆ. ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ(ಮಳೆಯಾಶ್ರೀತ ಪ್ರದೇಶಾಭಿವೃದ್ಧಿ)ದಡಿ, ಚಳ್ಳಕೆರೆ, ಮೊಳಕಾಲ್ಮೂರು ಮತ್ತು ಚಿತ್ರದುರ್ಗ ತಾಲೂಕುಗಳ 60 ಆಯ್ದ ಗ್ರಾಮಗಳಲ್ಲಿ ಪ್ರತಿ ಫಲಾನುಭವಿಗೆ 20 ಸಾವಿರ ರೂ.ಗರಿಷ್ಟ ಸಹಾಯಧನದೊಂದಿಗೆ 404.71 ಲಕ್ಷ ರೂ. ವೆಚ್ಚದಲ್ಲಿ 2 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಸುಗಳನ್ನು ವಿತರಿಸಲಾಗಿತ್ತು.
ನರೇಗಾದಡಿ ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ವಿಭಾಗದಲ್ಲಿ 7,68,421 ಮಾನವ ದಿನಗಳನ್ನು ಸೃಜಿಸಲಾಗಿದೆ. ಬದು ಮತ್ತು ಕೃಷಿ ಹೊಂಡ ನಿರ್ಮಾಣಕ್ಕೆ ರಾಜ್ಯದಲ್ಲೇ ಎರಡನೇ ಸ್ಥಾನ ಲಭಿಸಿದೆ. ಬೆಂಗಳೂರು ವಿಭಾಗದಲ್ಲಿ ಜಲಾನಯನ ಯೋಜನೆ ಅನುಷ್ಠಾನಕ್ಕೆ ಜಿಲ್ಲೆ ಮೊದಲ ಸ್ಥಾನ ಪಡೆದಿದೆ.
ಜಿಲ್ಲೆಯಲ್ಲಿ ಮಣ್ಣು ಪರೀಕ್ಷೆಗೆ ಸಂಬಂಧಿಸಿದಂತೆ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಲಭಿಸಿದೆ.‘ನಾವು ಸತ್ತರೆ ಮಣ್ಣಿಗೆ,ಮಣ್ಣು ಸತ್ತರೆ ಎಲ್ಲಿಗೆ, ಮಣ್ಣಿನ ಆರೋಗ್ಯದಿಂದ ಬೆಳೆಗಳ ಆರೋಗ್ಯ-ನಮ್ಮ ಆರೋಗ್ಯ’ಎಂಬ ಘೋಷಣೆಯೊಂದಿಗೆ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಮಣ್ಣು ಆರೋಗ್ಯ ಅಭಿಯಾನದಡಿ ಜಿಲ್ಲೆಯ 29,665 ರೈತರಿಗೆ ಮಣ್ಣು ಆರೋಗ್ಯ ಚೀಟಿ ನೀಡಲಾಗಿದೆ.
ಹಿರಿಯೂರು ತಾಲೂಕು ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರಕ್ಕೆ 2024-25ನೇ ಸಾಲಿನಲ್ಲಿ ರಾಜ್ಯಮಟ್ಟದ ದ್ವಿತೀಯ ಪ್ರಶಸ್ತಿ ಲಭಿಸಿದೆ. ಸಾಮಾಜಿಕ ಜಾಲತಾಣ ಬಳಸಿಕೊಂಡು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್. ರಜನೀಕಾಂತ ಅವರು ನೀಡುತ್ತಿರುವ ತಾಂತ್ರಿಕ ಮಾಹಿತಿಗೆ ಇಲಾಖೆ ದ್ವಿತೀಯ ಸ್ಥಾನದ ಪ್ರಶಸ್ತಿ ನೀಡಿದೆ.
ಜಿಲ್ಲೆಗೆ ಸಂದಿರುವ ಈ ಗೌರವಕ್ಕೆ ಡಿಸಿ ಟಿ. ವೆಂಕಟೇಶ್, ಜಿಪಂ ಸಿಇಒ ಎಸ್.ಜೆ. ಸೋಮಶೇಖರ್, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಸಿ ಮೆಹಬೂಬ್ ಜಿಲಾನಿ ಖುರೇಷಿ ಹರ್ಷ ವ್ಯಕ್ತಪಡಿಸಿದ್ದಾರೆ.