

ಖ್ಯಾತ ಸರೋದ್ ವಾದಕ ಪಂ.ರಾಜೀವ ತಾರಾನಾಥರ ಮೊದಲ ನೆನಪಿನ ಕಾರ್ಯಕ್ರಮವನ್ನು ಜೂನ್ 11ರಂದು ಬೆಳಗ್ಗೆ 11 ಗಂಟೆಗೆ ನಗರದ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ.
ಗಣೇಶ ಅಮೀನಗಡ ಹಾಗೂ ರಘುಪತಿ ತಾಮ್ಹನ್ ಕರ್ ಸಂಪಾದಿಸಿದ ಪಂ.ರಾಜೀವ ತಾರಾನಾಥರ ಕುರಿತ ‘ಸರೋದ್ ಸ್ವರಯಾನ’ ಕೃತಿಯ ಮೂರನೆಯ ಮುದ್ರಣವನ್ನು ಸಿತಾರ್ ವಾದಕಿ ಹಾಗೂ ಲೇಖಕಿ ಸಿ.ಎಸ್.ಸರ್ವಮಂಗಳಾ ಬಿಡುಗಡೆಗೊಳಿಸುವರು. ಹಿರಿಯ ರಂಗಕರ್ಮಿ ಕಪ್ಪಣ್ಣ ಅವರು ರಾಜೀವ ತಾರಾನಾಥರೊಂದಿಗಿನ ಒಡನಾಟದ ನೆನಪುಗಳನ್ನು ಹಂಚಿಕೊಳ್ಳುವರು. ಸಂಗೀತ ವಿವಿಯ ಕುಲಸಚಿವ (ಮೌಲ್ಯಮಾಪನ) ಪ್ರೊ.ಎಂ.ಜಿ.ಮಂಜುನಾಥ್ ಹಾಗೂ ಸಂಗೀತ ವಿವಿಯ ಹಣಕಾಸು ಅಧಿಕಾರಿಗಳು ಹಾಗೂ ಪ್ರಭಾರ ಕುಲಸಚಿವರಾದ ರೇಖಾ ಉಪಸ್ಥಿತರಿರುವರು. ಸಂಗೀತ ವಿವಿ ಕುಲಪತಿ ಡಾ.ನಾಗೇಶ್ ವಿ.ಬೆಟ್ಟಕೋಟೆ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ಸಂಗೀತ ವಿವಿಯ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ನೀಡುವರು ಎಂದು ಪ್ರಕಟಣೆ ತಿಳಿಸಿದೆ.