

ನಂಜನಗೂಡು: ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿಚಾರವಾದಿ ಪ.ಮಲ್ಲೇಶ್ ಹೇಳಿಕೆ ಖಂಡಿಸಿ ಬ್ರಾಹ್ಮಣ ಧರ್ಮ ಸಹಾಯ ಸಭಾ ವತಿಯಿಂದ ಶನಿವಾರ ರಾತ್ರಿ ಪಂಜಿನ ಮೆರವಣಿಗೆ ನಡೆಯಿತು.
ನಗರದ ಪ್ರಸನ್ನ ಚಿಂತಾಮಣಿ ಗಣಪತಿ ದೇಗುಲದ ಬಳಿ ಜಮಾಯಿಸಿದ ಸಮುದಾಯವರು ಪ.ಮಲ್ಲೇಶ್ ವಿರುದ್ಧ ಘೋಷಣೆ ಕೂಗುತ್ತಾ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದರು. ಬ್ರಾಹ್ಮಣ ಧರ್ಮ ಸಹಾಯ ಸಭಾ ಅಧ್ಯಕ್ಷ ಆರ್.ಗೋವರ್ಧನ್ ಮಾತನಾಡಿ, ಪ.ಮಲ್ಲೇಶ್ ಅವರು ಬ್ರಾಹ್ಮಣ ಸಮಾಜವನ್ನು ನಿಂದಿಸುವ ಮೂಲಕ ಸಮಾಜದಲ್ಲಿ ಅಶಾಂತಿಯುಂಟು ಮಾಡುತ್ತಿದ್ದಾರೆ. ಅವರ ಹೇಳಿಕೆ ಕುರಿತು ವಿಷಾದ ವ್ಯಕ್ತಪಡಿಸಿದರೆ ಸಾಲದು. ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಬ್ರಾಹ್ಮಣರ ವಿರುದ್ಧ ಜನರನ್ನು ಪ್ರಚೋದಿಸುತ್ತಿದ್ದಾರೆ. ಬ್ರಾಹ್ಮಣ ಸಮಾಜ ಸಂಘಟಿತರಾಗಿ ಪ.ಮಲ್ಲೇಶ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಅವರ ವಿರುದ್ಧ ದೂರು ನೀಡಲಾಗಿದೆ. ಈ ಪ್ರಕರಣ ತಾರ್ಕಿಕ ಅಂತ್ಯ ಕಾಣುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.
ಯು.ಎನ್.ಪದ್ಮನಾಭರಾವ್, ಗೋಪಾಲ್‌ರಾವ್, ರಮೇಶ್, ರಂಗನಾಥ್, ಗೋಪಿನಾಥ್, ಗುರುರಾಜ್, ಇಂದ್ರೇಶ್, ಅನಂತರಾಮು, ಸತೀಶ್ ದಳವಾಯಿ, ಬಾಲಸುಬ್ರಹ್ಮಣ್ಯ, ನಾಗಸುಂದರ, ಸುಧಾ ಗಣೇಶ್‌ಮೂರ್ತಿ, ಮುರುಳಿ, ರವಿಕುಮಾರ್, ನಂದೀಶ್, ಶ್ರೀಕಂಠಪ್ರಸನ್ನ, ಉಮೇಶ್ ಭಾಗವಹಿಸಿದ್ದರು.
ನಂಜನಗೂಡಿನಲ್ಲಿ ಬ್ರಾಹ್ಮಣ ಧರ್ಮ ಸಹಾಯ ಸಭಾ ವತಿಯಿಂದ ಪ.ಮಲ್ಲೇಶ್ ಹೇಳಿಕೆ ಖಂಡಿಸಿ ಪಂಜಿನ ಮೆರವಣಿಗೆ ನಡೆಯಿತು. ಗೋವರ್ಧನ್, ಯು.ಎನ್.ಪದ್ಮನಾಭರಾವ್, ಗೋಪಾಲ್ ಇತರರು ಇದ್ದರು.