ವಿಜಯವಾಣಿ ಸುದ್ದಿಜಾಲ ಕೋಲಾರ
ನ್ಯಾಯಾಲಯ ಕಲಾಪ ಸುಸೂತ್ರವಾಗಿ ನಡೆಯಲು ಒಂದು ತಂಡವಾಗಿ ಕೆಲಸ ಮಾಡಬೇಕಿದೆ. ಪ್ರಾವೀಣ್ಯತೆ ಬೆಳೆಸಿಕೊಂಡರೆ ಗೌರವ ಎಂಬುದು ಅವರನ್ನು ಅರಸಿ ಬರುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಆರ್ ಮಂಜುನಾಥ್ ತಿಳಿಸಿದರು.
ನಗರದ ವಕೀಲರ ಸಮುದಾಯ ಭವನದಲ್ಲಿ ಸೋಮವಾರ ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನ್ಯಾಯಾಲಯದಲ್ಲಿ ವಾದ ಮಂಡಿಸಿ ತಮ್ಮ ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಟ್ಟಾಗ ವಕೀಲರಿಗೆ ಆಗುವ ಸಂತೋಷ, ಸಾರ್ಥಕ ಭಾವಕ್ಕೆ ಬೆಲೆ ಕಟ್ಟಲಾಗದು. ನ್ಯಾಯಾಲಯದಲ್ಲಿ ವಾದ ಮಂಡಿಸುವಾಗ ಯಾವ ಪ್ರಶ್ನೆ ಕೇಳಬೇಕು, ಕೇಳಬಾರದು ಎನ್ನುವ ಸ್ಪಷ್ಟತೆ ವಕೀಲರಿಗೆ ಇರಬೇಕು. ವರ್ಷವಿಡೀ ನಡೆಯುವ ನ್ಯಾಯಾಲಯ ಕೆಲಸದ ನಡುವೆ ಸಣ್ಣ ಖುಷಿ ನೀಡುವ ವಕೀಲರ ದಿನಾಚರಣೆ ಮಹತ್ವದ್ದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಎರಡನೇಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಚ್.ದೇವರಾಜ್ ಮಾತನಾಡಿ, ವಕೀಲ ವೃತ್ತಿಯಲ್ಲಿ ಅನೇಕ ಸವಾಲುಗಳಿದ್ದು, ನಿಯಮ ಪಾಲನೆ ಜತೆಗೆ ಅರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ವಕೀಲರು ಸಮಾಜದಲ್ಲಿ ನಿರ್ವಹಿಸಬಹುದಾದ ಕಾರ್ಯಗಳಿಗೆ ಮಿತಿಯಿಲ್ಲ. ವಕೀಲರ ಶ್ರಮ ಮತ್ತು ತ್ಯಾಗ ಸಮಾಜ ಗುರುತಿಸುತ್ತದೆ. ಪರಿಶ್ರಮದಿಂದ ಮಾತ್ರ ವಕೀಲ ವೃತ್ತಿಯಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ತಿಳಿಸಿದರು.
ಹಿರಿಯ ವಕೀಲ ಶಂಕರಪ್ಪ ಮಾತನಾಡಿ, ಕೊನೆಯಿಲ್ಲದ ವಕೀಲರ ವೃತ್ತಿಯಲ್ಲಿ ತಮ್ಮನ್ನು ಬದಿಗಿರಿಸಿ ಕಕ್ಷಿದಾರರ ನೋವನ್ನು ಸರಿಯಾಗಿ ಅರ್ಥೈಸಿಕೊಂಡು ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಕೊಡಿಸಲು ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ ಮಾತನಾಡಿ, ಪ್ರಜಾಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮರ್ಪಕವಾಗಿ ಕೆಲಸ ಮಾಡುವಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ ಸಮಾಜದ ಯಾವುದೇ ಸಮಸ್ಯೆಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗುವುದರಿಂದ ವಕೀಲರಿಗೆ ಹೆಚ್ಚಿನ ಜವಾಬ್ದಾರಿಗಳಿರುತ್ತವೆ ಎಂದರು.
ವಕೀಲರ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಿದ್ದು, ನ್ಯಾಯಾಧೀಶರು, ವಕೀಲರು ಹಾಗೂ ನ್ಯಾಯಾಲಯ ಸಿಬ್ಬಂದಿಗಳು ರಕ್ತದಾನ ಮಾಡಿದರು.
ನ್ಯಾಯಾಧೀಶರಾದ ಬಿ.ಪಿ.ದೇವಮಾನೆ, ನಿರ್ಮಲಾ ದೇವಿ, ಕೆ.ದಿವ್ಯಾ, ಬಾಲಚಂದ್ರ ಎನ್ ಭಟ್, ಶಕುಂತಲಾ, ನಟೇಶ್, ಪಿ.ಮದನ್, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎನ್.ಬೈರಾರೆಡ್ಡಿ, ಹಿರಿಯ ವಕೀಲರಾದ ಬಿಸಪ್ಪಗೌಡ, ರತ್ನಮ್ಮ, ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ವಕೀಲರು ಉಪಸ್ಥಿತರಿದ್ದರು.
ಚಿತ್ರ ೧೧ ಕೆ.ಎಲ್.ಆರ್.೦೩ : ವಕೀಲರ ದಿನಾಚರಣೆಯನ್ನು ಉದ್ಘಾಟನೆ ಮಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಆರ್ ಮಂಜುನಾಥ್, ವಕೀಲರ ಸಂಘದ ಅಧ್ಯಕ್ಷ ಮುನೇಗೌಡ, ಹಿರಿಯ ವಕೀಲ ಶಂಕರಪ್ಪ, ಸತ್ರ ನ್ಯಾಯಾಧೀಶರಾದ ಎಚ್.ದೇವರಾಜ್ ಇದ್ದರು.