ನ್ಯಾಯಮಾರ್ಗದ ಕಾರ್ಯಗಳು ಭಗವಂತನಿಗೆ ಅರ್ಪಿತ

18ald 1 vishwakarma
ಆಲ್ದೂರಿನಲ್ಲಿ ಆಯೋಜಿಸಿದ್ದ ವೈಶ್ವಕರ್ಮಣ ಮಹಾಯಜ್ಞದಲ್ಲಿ ಮಾಜಿ ಸೈನಿಕ ನಾಗರಾಜ್ ದಂಪತಿಯನ್ನು ಸನ್ಮಾನಿಸಲಾಯಿತು. ನಾರಾಯಣ ಆಚಾರ್ಯ, ವಿದ್ವಾನ್ ಆದರ್ಶ ಆಚಾರ್ಯ, ವಾಸುದೇವ ಆಚಾರ್ಯ, ಸಿ. ಸುರೇಶ್, ಮಲ್ಲೇಶ್ ಇತರರಿದ್ದರು.
Published on

ಆಲ್ದೂರು: ಕೇವಲ ಪೂಜೆ ಮಾಡುವುದು ಧರ್ಮವಲ್ಲ. ನಾವು ಮಾಡುವ ಕೆಲಸದಲ್ಲಿ ಶ್ರದ್ಧಾಭಕ್ತಿಯಿಂದ, ಮನಪೂರ್ವಕವಾಗಿ ನಮ್ಮನ್ನು ತೊಡಗಿಸಿಕೊಂಡು ನ್ಯಾಯಮಾರ್ಗದಲ್ಲಿ ಮಾಡುವ ಎಲ್ಲ ಕಾರ್ಯಗಳೂ ಭಗವಂತನಿಗೆ ಅರ್ಪಿತವಾಗುತ್ತವೆ. ಅದು ಧರ್ಮ ಎನಿಸಿಕೊಳ್ಳುತ್ತದೆ ಎಂದು ವಿದ್ವಾನ್ ಆದರ್ಶ ಆಚಾರ್ಯ ತಿಳಿಸಿದರು.

ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದಿಂದ ಭಾನುವಾರ ವೈಶ್ವಕರ್ಮಣ ಮಹಾಯಜ್ಞ ಹಾಗೂ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಶಾಸಗಳ ಪ್ರಕಾರ ಭಗವಂತ ಯಾವಾಗ ಭೂಮಿಗೆ ಇಳಿಯಬೇಕೆಂದು ಸಂಕಲ್ಪ ಮಾಡುತ್ತಾನೋ ಆಗ ಆ ದೇವರು ಆರಿಸಿಕೊಂಡ ಭೂ ಭಾಗವೇ ಭಾರತ. ಇಂತಹ ಪುಣ್ಯಭೂಮಿಯಲ್ಲಿ ಹಿಂದುಗಳಾಗಿ ಹುಟ್ಟಿದ್ದೇವೆ. ಶಿಲ್ಪಜ್ಞಾನ ಎಂಬುದು ವಿಶ್ವಬ್ರಾಹ್ಮಣರಲ್ಲಿ ವಿಶೇಷವಾದುದು. ಅಮರಕೋಶದಲ್ಲಿ ಶಿಲ್ಪಜ್ಞಾನವನ್ನೇ ವಿಜ್ಞಾನ ಎಂದು ಹೇಳಲಾಗಿದೆ. ದೆಹಲಿಯಲ್ಲಿರುವ ದೊಡ್ಡ ಕಬ್ಬಿಣದ ಕಂಬವು ಇಂದಿಗೂ ತುಕ್ಕು ಹಿಡಿದಿಲ್ಲ. ಇಂತಹ ಕಲೆಯನ್ನು ನಿರ್ಮಿಸಲು ಸಾಧ್ಯವಾಗಿದ್ದು ಕೇವಲ ವಿಶ್ವಕರ್ಮರಿಗೆ ಮಾತ್ರ. ಮಾನವ ಬಟ್ಟೆಯನ್ನೇ ಧರಿಸದ ಕಾಲದಲ್ಲಿದ್ದಾಗಲೇ ವಿಶ್ವಕರ್ಮರು ಸ್ವರ್ಣಜ್ಞಾನದ ಮೂಲಕ ಆಭರಣ ತಯಾರಿಕೆ ಕಲಿತಿದ್ದರು. ಲೋಹಜ್ಞಾನದಲ್ಲೂ ಪರಿಣತಿ ಹೊಂದಿದ್ದರು. ಇದು ನಮ್ಮ ಸಮಾಜ ಹೆಮ್ಮೆಪಡುವ ವಿಚಾರ ಎಂದರು.

ಹಿಂದಿನ ಶಿಲ್ಪಿಗಳು ದೇವರ ಶಿಲ್ಪಗಳನ್ನು ರಚಿಸಿ ಶ್ಲೋಕಗಳನ್ನು ರಚನೆ ಮಾಡಿ ಯಾವ ದೇವರಿಗೆ ಯಾವ ರೂಪ, ಯಾವ ಆಯುಧ ಎಂಬುದನ್ನು ನಿರ್ಮಿಸಿ, ಯಾವ ದೇವರ ಆರಾಧನೆ ಯಾವ ಲಗಳನ್ನು ಪಡೆಯಬಹುದು ಎಂಬುದನ್ನು ತಿಳಿಸಿದವರು ವಿಶ್ವ ಬ್ರಾಹ್ಮಣರು ಎಂದರು.

ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಪಿ.ಎನ್.ನಾಗರಾಜ ಆಚಾರ್ಯ ಮಾತನಾಡಿ, ನಮ್ಮ ಸಮಾಜದಿಂದ ದೇಶ ಸೇವೆ ಮಾಡಲು ಸೈನ್ಯಕ್ಕೆ ಸೇರಿರುವವರ ಸಂಖ್ಯೆ ಕಡಿಮೆ. ದೇಶಕ್ಕಾಗಿ ದುಡಿಯುವವರ ಸಂಖ್ಯೆ ಕಡಿಮೆಯಾಗಿದೆ. ದೇಶದೊಳಗೆ ನಾವು ಸುರಕ್ಷಿತವಾಗಿರಲು ಕಾರಣ ನಮ್ಮ ಸೈನಿಕರು. ಆದ್ದರಿಂದ ನಮ್ಮ ಸಮಾಜದ ಯುವಕರು ದೇಶ ಸೇವೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಬ್ರಹ್ಮಶ್ರೀ ಸತೀಶ್ ಆಚಾರ್ಯ ವೈಶ್ವಕರ್ಮಣ ಮಹಾಯಜ್ಞ ಹಾಗೂ 6 ವಟುಗಳಿಗೆ ಸಾಮೂಹಿಕ ಬ್ರಹ್ಮೋಪದೇಶ ನೀಡಿದರು. ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಹಿಂದುಗಳಿಗೆ, ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕೋಶಾಧಿಕಾರಿ ವಾಸುದೇವ ಆಚಾರ್ಯ, ಕಾಫಿ ಬೆಳೆಗಾರರ ಸಂಘದ ಹೋಬಳಿ ಅಧ್ಯಕ್ಷ ಸಿ.ಸುರೇಶ್, ಮಲ್ಲೇಶ್, ರತೀಶ್, ಶಶಿಧರ್, ದಿವಾಕರ್, ಚಂದ್ರಶೇಖರ್, ಪ್ರಶಾಂತ್, ಸುರೇಶ್, ದಿನೇಶ್, ಅನ್ನಪೂರ್ಣಾ, ಕಾಮಾಕ್ಷಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net