ಬೆಂಗಳೂರು: ಕೆಲಸ ಇದ್ದರೆ ತಿಳಿಸುವಂತೆ ಫೇಸ್‌ಬುಕ್‌ನಲ್ಲಿ ಫೋನ್ ನಂಬರ್ ಸಹಿತ ಪೋಸ್ಟ್ ಹಾಕಿದ್ದ ಯುವತಿಗೆ ಕರೆ ಮಾಡಿದ್ದ ಯುವಕ, ಕೆಲಸ ಕೊಡಿಸುವುದಾಗಿ ನಂಬಿಸಿ ಕರೆದೊಯ್ದು ತನ್ನ ಸ್ನೇಹಿತರ ಜತೆಗೂಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಪಶ್ಚಿಮ ಬಂಗಾಳ ಮೂಲದ 24 ವರ್ಷದ ಯುವತಿ ಸಂತ್ರಸ್ತೆ. ಈಕೆ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ಕೃತ್ಯ ಎಸಗಿದ ಆರೋಪಿಗಳಾದ ಉತ್ತರ ಪ್ರದೇಶ ಮೂಲದ ರಾಜ (38), ಬಲರಾಮ್ (28), ಶಬಸ್ಟಿನ್ (24) ಮತ್ತು ಜಿತೇಂದ್ರನನ್ನು (26) ಬಂಧಿಸಿರುವ ಬೆಂಗಳೂರಿನ ಸೋಲದೇವನಹಳ್ಳಿ ಠಾಣೆ ಪೊಲೀಸರು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಯುವತಿ ನಗರದಲ್ಲಿ ಹಲವು ತಿಂಗಳಿಂದ ಕೆಲಸ ಮಾಡಿಕೊಂಡಿದ್ದರು. ಲಾಕ್‌ಡೌನ್ ವೇಳೆ ಕೆಲಸ ಹೋಗಿತ್ತು. ಖರ್ಚಿಗೆ ಸಂಕಷ್ಟ ಎದುರಾಗಿದ್ದು, ಕೆಲಸಕ್ಕಾಗಿ ಹುಡುಕಿದ್ದರು. ಎಲ್ಲಿಯೂ ಕೆಲಸ ಸಿಗದ ಹಿನ್ನೆಲೆಯಲ್ಲಿ ತನ್ನ ಫೇಸ್‌ಬುಕ್ ಖಾತೆಯಲ್ಲೇ ‘ಕೆಲಸ ಇದ್ದರೆ ತಿಳಿಸುವಂತೆ’ ಬರೆದುಕೊಂಡು, ಫೋನ್ ನಂಬರ್ ಸಹಿತ ಪೋಸ್ಟ್ ಹಾಕಿದ್ದರು. ಅದನ್ನು ಗಮನಿಸಿದ್ದ ರಾಜ್ ಎಂಬುವನು ಸೆ.14ರಂದು ಯುವತಿಗೆ ಕರೆ ಮಾಡಿ, ಕೆಲಸ ಇದೆ ಭೇಟಿಯಾಗುವಂತೆ ಸೂಚಿಸಿ ವಿಳಾಸ ಕೊಟ್ಟಿದ್ದ. ಆತನ ಮಾತನ್ನು ನಂಬಿದ್ದ ಯುವತಿ, ಗುಣಿ ಅಗ್ರಹಾರದಲ್ಲಿರುವ ಖಾಸಗಿ ಶಾಲೆಯೊಂದರ ಸಮೀಪ ಹೋಗಿದ್ದಳು. ಅಲ್ಲಿಗೆ ಬಂದಿದ್ದ ರಾಜ್, ತನ್ನ ಶೆಡ್‌ಗೆ ಕರೆದೊಯ್ದಿದ್ದ.
ಇದೇ ವೇಳೆ ಆತನ ಸ್ನೇಹಿತರಾದ ಬಲರಾಮ್, ಶಬಸ್ಟೀನ್, ಜಿತೇಂದ್ರ ಅಲ್ಲಿಗೆ ಬಂದಿದ್ದು ಎಲ್ಲರು ಸೇರಿ ಅತ್ಯಾಚಾರ ಎಸಗಿದ್ದಾರೆ. ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರಿಸಿಕೊಂಡು, ವಿಷಯವನ್ನು ಯಾರಿಗಾದರೂ ತಿಳಿಸಿದರೆ ಫೇಸ್‌ಬುಕ್‌ನಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದರು. ಬಳಿಕ ಆಕೆಯನ್ನು ಯಲಹಂಕದಲ್ಲಿ ತಂದು ಬಿಟ್ಟು ಹೋಗಿದ್ದರು. ಅಸ್ವಸ್ಥಗೊಂಡಿದ್ದ ಯುವತಿ ತನ್ನ ಸ್ನೇಹಿತನಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಳು.
ಬಳಿಕ ‘ನಮ್ಮ 100’ಗೆ ಕರೆ ಮಾಡಿ, ದೂರು ಮುಟ್ಟಿಸಿದ್ದಳು. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ್ದ ಹೋಯ್ಸಳ ಪೊಲೀಸರು, ಯುವತಿಯನ್ನು ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಕೊಟ್ಟ ಹೇಳಿಕೆಯನ್ನು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಉತ್ತರ ಭಾರತ ಮೂಲದವರಾದ ಆರೋಪಿಗಳು ನಗರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.