ನೌಕರರ ಸಂಘದ ಆಡಳಿತಾಧಿಕಾರಿ ನೇಮಕಕ್ಕೆ ಆಕ್ಷೇಪ: ವಿಚಾರಣೆ ಮುಂದೂಡಿದ ಹೈಕೋರ್ಟ್

highcourt
Published on

ಬೆಂಗಳೂರು : ರಾಜ್ಯಾದ್ಯಂತ 6 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಒಂದು ದೊಡ್ಡ ಸಂಘಕ್ಕೆ ಇಬ್ಬರು ಮಾಜಿ ಅಧ್ಯಕ್ಷರು, ಇತರರು ದೂರು ಕೊಟ್ಟ ಮಾತ್ರಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿದ ಸರ್ಕಾರ ಕ್ರಮ ಒಪ್ಪಲಾಗದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಹೈಕೋರ್ಟ್ ಮುಂದೆ ಪ್ರತಿಪಾದಿಸಿದೆ.

ಕೆಎಎಸ್ ಅಧಿಕಾರಿ ಸಿ.ಎನ್. ಮಂಜುನಾಥ್ ಅವರನ್ನು ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಅ.7ರಂದು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಸಲ್ಲಿಸಿರುವ ತಕರಾರು ಅರ್ಜಿಯು ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.

ಈ ವೇಳೆ ಅರ್ಜಿದಾರ ಸಂಘದ ಪರ ವಾದ ಮಂಡಿಸಿದ ಹಿರಿಯ ವಕೀಲ ಜಯಕುಮಾರ್ ಎಸ್. ಪಾಟೀಲ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯಾದ್ಯಂತ 6 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಇಬ್ಬರು ಮಾಜಿ ಅಧ್ಯಕ್ಷರು ಹಾಗೂ ನಾಲ್ವರು ಸದಸ್ಯರು ದೂರು ಕೊಟ್ಟರು ಎಂಬ ಮಾತ್ರಕ್ಕೆ ಇಂತಹ ದೊಡ್ಡ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವ ಸರ್ಕಾರದ ಕ್ರಮ ಒಪ್ಪಲಾಗದು.

ದೂರು ಕೊಟ್ಟಿರುವ ನಾಲ್ವರ ಪೈಕಿ ಮೂವರು ಸೇವೆಯಿಂದ ಅನೇಕ ಬಾರಿ ಅಮಾನತ್ತುಗೊಂಡ ಹಿನ್ನಲೆ ಹೊಂದಿದ್ದಾರೆ. ದೂರು ಬಂದಿದೆ, ಸಂಘದ ಆಡಳಿತ ಮಂಡಳಿಯ ಅವಧಿ ಮುಗಿದಿದೆ ಎಂಬ ಕಾರಣಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಆದರೆ, ಆಡಳಿತ ಮಂಡಳಿ ಪದಾಧಿಕಾರಿಗಳ ಅಧಿಕಾರವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಿ ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ. ಒಂದಡೆ ಸಂಘದ ಚುನಾವಣಾ ಪ್ರಕ್ರಿಯೆ ಅರ್ಧ ಹಾದಿ ಕ್ರಮಿಸಿದೆ. ಇಂತಹ ಸಂದರ್ಭದಲ್ಲಿ ಆಡಳಿತಾಧಿಕಾರಿ ನೇಮಕ ಮಾಡಿರುವುದು ಸರಿಯಲ್ಲ. ಆಡಳಿತಾಧಿಕಾರಿ ನೇಮಕವು ಚನಾವಣೆ ಪ್ರಕ್ರಿಯೆಯಲ್ಲಿ ಬಲವಂತದ ಹಸ್ತಕ್ಷೇಪ ಆಗಲಿದೆ ಎಂದು ಹೇಳಿದರು.

ಆಡಳಿತಾಧಿಕಾರಿ ನೇಮಕ ಆದೇಶಕ್ಕೆ ನೀಡಿರುವ ಮಧ್ಯಂತರ ತಡೆ ನೀಡಬೇಕು ಹಾಗೂ ತಮ್ಮನ್ನು ಈ ಪ್ರಕರಣದಲ್ಲಿ ಅರ್ಜಿದಾರರನ್ನಾಗಿ ಸೇರಿಸಬೇಕು ಎಂದು ಸಂಘದ ಸದಸ್ಯರಾದ ಚಂದ್ರಶೇಖರ್ ನುಗ್ಲಿ, ಶಿವರುದ್ರಯ್ಯ, ನಿಂಗೇಗೌಡ, ಕೃಷ್ಣಮೂರ್ತಿ ಎಂಬುವರು ಸಲ್ಲಿಸಿರುವ ಮಧ್ಯಂತರ ಅರ್ಜಿ ಸಂಬಂಧ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ. ರವಿವರ್ಮಕುಮಾರ್, ಸಂಘಕ್ಕೆ 2019ರಲ್ಲಿ ಚುನಾವಣೆ ನಡೆದಿತ್ತು.

2024ರ ಜೂ.6ಕ್ಕೆ ಅವಧಿ ಅಂತ್ಯ ಆಗಿದೆ. ಅವಧಿ ವಿಸ್ತರಣೆ ಅಥವಾ ಅವಧಿ ಮುಗಿದ ಬಳಿಕ ಪದಾಧಿಕಾರಿಗಳು ಮುಂದುವರಿಯಲು ಅವಕಾಶವಿಲ್ಲ. ಸದ್ಯ ಯಾವುದೇ ಅಧಿಕಾರ ಹೊಂದಿಲ್ಲದ ಆಡಳಿತ ಮಂಡಳಿಯ ಮುಂದಾಳತ್ವದಲ್ಲಿ ಚುನಾವಣೆ ನಡೆದರೆ ಪಾರದರ್ಶಕತೆ ನಿರೀಕ್ಷಿಸಲಾಗದು.

ಈಗಿರುವ ಚುನಾವಣಾಧಿಕಾರಿಯನ್ನು ಆಡಳಿತ ಮಂಡಳಿಯೇ ನೇಮಿಸಿದ್ದು. ಚುನಾವಣಾ ಪ್ರಕ್ರಿಯೆಗೆ ಅಡಚಣೆ ಉಂಟು ಮಾಡುವುದು ನಮ್ಮ ಉದ್ದೇಶವಲ್ಲ. ಚುನಾವಣಾ ಪ್ರಕ್ರಿಯೆ ನಡೆಸಲು ನ್ಯಾಯಾಲಯವೇ ಒಬ್ಬ ಸ್ವತಂತ್ರ ವ್ಯಕ್ತಿಯನ್ನು ನೇಮಿಸಲಿ. ಕೋರ್ಟ್ ಮೇಲ್ವಿಚಾರಣೆಯಲ್ಲೇ ಚುನಾವಣೆ ನಡೆಯಲಿ. ಬೇಕಾದಷ್ಟು ವಿಚಾರಗಳನ್ನು ನ್ಯಾಯಾಲಯಕ್ಕೆ ತಿಳಿಸಲಿಕ್ಕಿದೆ ಹಾಗೂ ಮಧ್ಯಂತರ ಅರ್ಜಿದಾರರನ್ನು ಪ್ರಕರಣದಲ್ಲಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ನ.25ಕ್ಕೆ ಮುಂದೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net