

ಹುಣಸೂರು: ಬಿಡುಗಡೆಗೊಂಡಿರುವ ಜೀತವಿಮುಕ್ತರಿಗೆ ಸರ್ಕಾರಿ ಸೌಲಭ್ಯ ಪಡೆದಿರುವ ಕುರಿತು ಮಾಹಿತಿ ಪಡೆಯಲು ಅಧಿಕಾರಿಗಳು ಜೀತವಿಮುಕ್ತರ ಬಳಿಗೆ ತೆರಳಬೇಕು ಎಂದು ಹುಣಸೂರು ಉಪವಿಭಾಗಾಧಿಕಾರಿ ವರ್ಣಿತ್ ನೇಗಿ ಸೂಚಿಸಿದರು.
ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಜೀತವಿಮುಕ್ತರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ಉಪವಿಭಾಗ ಮಟ್ಟದಲ್ಲಿ ಕಳೆದ 10 ವರ್ಷಗಳಿಂದ ಇಲ್ಲಿಯವರೆಗೆ ಸುಮಾರು 450ಕ್ಕೂ ಹೆಚ್ಚು ಜೀತಗಾರರನ್ನು ಗುರುತಿಸಿ ಬಿಡುಗಡೆಗೊಳಿಸಿ ಆದೇಶಿಸಲಾಗಿದೆ. ಬಿಡುಗಡೆಗೊಂಡ ಜೀತವಿಮುಕ್ತರಿಗೆ ಎಲ್ಲ ಇಲಾಖೆಗಳು ತಮ್ಮ ಇಲಾಖೆಗೆ ಬರುವ ಸರ್ಕಾರದ ಸೌಲಭ್ಯಗಳನ್ನು ಆದ್ಯತೆ ಮೇಲೆ ಈ ಕುಟುಂಬಗಳಿಗೆ ಕಲ್ಪಿಸಿಕೊಡಬೇಕು. ವಾಸಿಸಲು ಮನೆ, ನಿಗಮಗಳಿಂದ ಸಾಲಸೌಲಭ್ಯ, ಮುಂತಾದ ಸೌಲಭ್ಯಗಳನ್ನು ಶೀಘ್ರವೇ ಕಲ್ಪಿಸಿಕೊಟ್ಟು ಈ ನೊಂದ ಕುಟುಂಬಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಸರ್ಕಾರದ ಅಧಿಕಾರಿಗಳ ಮೇಲಿದ್ದು, ಅದನ್ನು ನಾವು ಆದ್ಯತೆ ಕೆಲಸವೆಂದು ಭಾವಿಸಬೇಕು. ಜೀತವಿಮುಕ್ತರ ಪುನರ್ವಸತಿ ಸಮರ್ಪಕವಾಗಿ ಆಗಿದೆಯೋ, ಇಲ್ಲವೋ ಎನ್ನುವುದನ್ನು ಅರಿಯಲು ನೀವೇ ಅವರ ಬಳಿ ತೆರಳಿರಿ. ಮಾಹಿತಿ ಪಡೆದು ಸೌಲಭ್ಯ ಕಲ್ಪಿಸಿರಿ ಎಂದು ಸೂಚಿಸಿದರು.
ಮುಖಂಡ ಎಚ್.ಡಿ.ಕೋಟೆ ಬಸವರಾಜ್ ಮಾತನಾಡಿ, ಪಂಚಾಯಿತಿರಾಜ್ ಇಲಾಖೆ ಜೀತವಿಮುಕ್ತ ಕುಟುಂಬಕ್ಕೆ ಸೌಲಭ್ಯಗಳನ್ನು ಕೊಡುವಲ್ಲಿ ವಿಫಲವಾಗಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜೀತದಿಂದ ಬಿಡುಗಡೆಗೊಂಡ ವ್ಯಕ್ತಿಗಳು ಪುನಃ ಜೀತಗಾರಿಕೆಗೆ ಹೋಗುವ ಸ್ಥಿತಿಯಲ್ಲಿದ್ದಾರೆ. ಇದನ್ನು ಕೂಡಲೇ ತಡೆಗಟ್ಟಿ ಜೀತವಿಮುಕ್ತರಿಗೆ ಅಗತ್ಯವಾಗಿ ಬೇಕಾಗಿರುವ ಸೌಲಭ್ಯಗಳನ್ನು ಕೂಡಲೇ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ಮಾತನಾಡಿ, ಹುಣಸೂರು ತಾಲೂಕಿನಲ್ಲಿ 23 ಮಂದಿ ಜೀತಗಾರಿಕೆಯಿಂದ ಬಿಡುಗಡೆಗೊಂಡಿದ್ದು, ಇವರ ಪೈಕಿ ಎಲ್ಲರೂ ಪರಿಶಿಷ್ಟ ಜಾತಿ/ಪಂಗಡದ ಸಮುದಾಯಗಳಿಗೆ ಸೇರಿದವರಾಗಿರುತ್ತಾರೆ. ಈ ಕುಟುಂಬಗಳಲ್ಲಿ ಕೆಲವು ಕುಟುಂಬಗಳಿಗೆ ವಾಸಿಸಲು ಮನೆ ಇರುವುದಿಲ್ಲ. ಈ ಕುಟುಂಬಕ್ಕೆ ವಿವಿಧ ಅಭಿವೃದ್ಧಿ ನಿಗಮಗಳಿಂದ ಸಾಲಸೌಲಭ್ಯ ಕಲ್ಪಿಸಿಕೊಡಬೇಕು. ಬಹುತೇಕ ಕುಟುಂಬಗಳು ಭೂರಹಿತರಾಗಿದ್ದು, ನಿಗಮಗಳಿಂದ ಭೂಒಡೆತನ ಯೋಜನೆಯಡಿ ತಲಾ 1 ಎಕರೆ ಭೂಮಿಯನ್ನು ಖರೀದಿಸಿಕೊಟ್ಟು ಕುಟುಂಬಗಳು ಶಾಶ್ವತವಾದ ಅಭಿವೃದ್ಧಿ ಹೊಂದುವಂತೆ ಮಾಡಬೇಕು. ಜೀತಗಾರಿಕೆ ವಿಮುಕ್ತರ ಮಕ್ಕಳನ್ನು ಸರ್ಕಾರಿ ವಸತಿ ಶಾಲೆಗಳಲ್ಲಿ ಉಚಿತ ವಿದ್ಯಾಭ್ಯಾಸ ಮಾಡಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಉಪತಹಸೀಲ್ದಾರ್ ಶಕೀಲಾಬಾನು, ತಾಲೂಕು ಪಂಚಾಯಿತಿ ಇಒ ಬಿ.ಕೆ. ಮನು ಸೇರಿದಂತೆ ಎಲ್ಲ ತಾಲೂಕಿನ ತಹಸೀಲ್ದಾರ್‌ಗಳು, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮಗಳ ಅಧಿಕಾರಿಗಳು ಜೀತವಿಮುಕ್ತರ ಜಾಗೃತಿ ಸಮಿತಿ ಸದಸ್ಯರಾದ ಮಲ್ಲಿಗಮ್ಮ, ಶಿವಣ್ಣ, ಚಂದ್ರಶೇಖರಮೂರ್ತಿ, ಮಹದೇವು, ದಲಿತ ಮುಖಂಡರಾದ ಬಲ್ಲೇನಹಳ್ಳಿ ಕೆಂಪರಾಜು, ಆದಿಜಾಂಬವ ಸಂಘದ ತಾಲೂಕು ಅಧ್ಯಕ್ಷ ಬಿ. ಶಿವಣ್ಣ ಭಾಗವಹಿಸಿದ್ದರು.
ಇದೇ ವೇಳೆ ಜೀತಗಾರಿಕೆಯಿಂದ ಬಿಡುಗಡೆಗೊಂಡಿದ್ದ ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಮಹೇಶ್ ಅವರಿಗೆ ಅಂಬೇಡ್ಕರ್ ಆವಾಸ್ ವಸತಿ ಯೋಜನೆಯಡಿ ವಾಸದ ಮನೆಯ ಹಕ್ಕುಪತ್ರವನ್ನು ವಿತರಿಸಲಾಯಿತು.