ನೈಜ ಜ್ಞಾನದಿಂದ ದೂರಾಗುತ್ತಿರುವ ಮಕ್ಕಳು

15
Published on

ಧ್ವನಿ ಎತ್ತಿ ಪುಸ್ತಕ ಓದುವ, ಮತ್ತೊಬ್ಬರು ಓದಿದ್ದನ್ನು ಕೇಳಿಸಿಕೊಂಡು ಮನನ ಮಾಡುವ ಅಕ್ಷರ ಸಂಸ್ಕೃತಿ ನಶಿಸಿ ಹೋಗುತ್ತಿರುವ ಕಾರಣ ಮನುಷ್ಯನ ಪಂಚೇಂದ್ರಿಯಗಳು ಸಹ ನಿಷ್ಕ್ರಿಯವಾಗುತ್ತಿವೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಸಬಿಹಾ ಭೂಮಿಗೌಡ ಅಭಿಪ್ರಾಯಪಟ್ಟರು.

ವಿ-ಕೇರ್ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ತಿಂಗಳ ಪುಸ್ತಕ ಓದು ನಾಲ್ಕನೇ ಸಂಚಿಕೆಯಲ್ಲಿ ಕಡಲ ತೀರದ ಭಾರ್ಗವ ಡಾ.ಶಿವರಾಮ ಕಾರಂತರ ದ್ವಿತೀಯ ಕಥಾ ಸಂಕಲನವಾದ ತೆರೆಯ ಮರೆಯಲ್ಲಿಯ ಆಯ್ದ ಕಥೆಗಳ ಓದು ಮತ್ತು ಚಿಂತನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಿದುಳು ಕೂಡ ಅಂಗಾಂಗಗಳ ಸಂಪರ್ಕ ಕಳೆದುಕೊಳ್ಳುತ್ತಿದೆ. ನಾಲಿಗೆ ಸರಿಯಾಗಿ ಹೊರಳದೆ, ಕಿವಿಯು ಕೇಳಿಸಿಕೊಳ್ಳದೆ, ಮಿದುಳು ಯೋಚಿಸುವ ಶಕ್ತಿ ಕಳೆದುಕೊಂಡು, ಬೆಳೆಯುತ್ತಿರುವ ಮಕ್ಕಳು ಕೂಡ ಇಂದು ನೈಜ ಜ್ಞಾನದಿಂದ ವಂಚಿತರಾಗಿ ಗಡಚಿಕ್ಕುವ ಸಂಗೀತ ಮತ್ತು ವಿಚಾರರಹಿತ ದೃಶ್ಯ ಮಾಧ್ಯಮಗಳ ಗೀಳಿನೊಂದಿಗೆ ವ್ಯತಿರಿಕ್ತ ಬೆಳವಣಿಗೆಗೆ ಒಳಗಾಗುತ್ತಿರುವುದು ಕಳವಳಕಾರಿಯಾಗಿದೆ. ಈ ನಿಟ್ಟಿನಲ್ಲಿ ಪುಸ್ತಕ ಓದು ಕಾರ್ಯಕ್ರಮಗಳು ಚಿಕಿತ್ಸಾತ್ಮಕ ಚಟುವಟಿಕೆಗಳಾಗಿ ಸಹಕರಿಸಬಲ್ಲವು. ಈ ಕಾರ್ಯಕ್ರಮ ಕ್ರಿಯಾಶೀಲ ಸಮಾಜ ಒಂದನ್ನು ಕಟ್ಟುವ ಪ್ರಕ್ರಿಯೆಯಾಗಿದೆ. ಇದನ್ನು ಅನುಷ್ಠಾನಕ್ಕೆ ತರುವ ವಿ-ಕೇರ್ ಸಂಸ್ಥೆಯ ಶ್ರಮ ಹಾಗೂ ದೂರ ದೃಷ್ಟಿ ಶ್ಲಾಘನೀಯ ಎಂದರು.

ಒಬ್ಬ ಲೇಖಕ ಹೇಗಿರಬೇಕು? ಲೇಖಕನ ಮಾನದಂಡಗಳು ಯಾವುವು ಎಂಬುದಕ್ಕೆ ಕಾರಂತರ ಬದುಕು ಬರಹ ಒಂದು ಮಾದರಿ ನಿದರ್ಶನ. ಪ್ರತಿಯೊಬ್ಬ ಬರಹಗಾರ ಮತ್ತು ಓದುಗ ಹಲವು ಮಿತಿಗಳಿಗೆ ಒಳಪಟ್ಟಿರುತ್ತಾನೆ. ಆದರೆ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಬಾಲ ಸಾಹಿತ್ಯ, ವಿಜ್ಞಾನ, ಕಾದಂಬರಿಗಳು, ಸಣ್ಣ ಕಥೆಗಳು, ಆತ್ಮ ಕಥನಗಳು, ಖಗೋಳ ಜ್ಞಾನ, ಪರಿಸರ, ಸಂಸ್ಕೃತಿ, ಯಕ್ಷಗಾನ, ನಾಟಕ, ಶಿಕ್ಷಣ, ವಿಶ್ವಕೋಶ, ಕನ್ನಡ ನಿಘಂಟು ಹೀಗೆ ತರಹೇವಾರಿ ಸಾಹಿತ್ಯ ಪ್ರಕಾರಗಳಲ್ಲಿ ಏಕಕಾಲದಲ್ಲಿ ತೊಡಗಿಸಿಕೊಂಡು, ಕನ್ನಡಕ್ಕೆ ಜ್ಞಾನಪೀಠ ತಂದುಕೊಟ್ಟ ಕಾರಂತರ ವಿದ್ಯಾಭ್ಯಾಸ ಕೇವಲ 10ನೇ ತರಗತಿ ಎಂದರೆ ಆಶ್ಚರ್ಯವಾಗುತ್ತದೆ ಎಂದರು.

ವಿ-ಕೇರ್ ಸಂಸ್ಥೆ ಸಂಸ್ಥಾಪಕಿ ಡಾ.ಕುಮುದಿನಿ ಅಚ್ಚಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಬರೆದಿರುವ ಕಾರಂತರ ಸಣ್ಣ ಕಥೆಗಳ ಹರವಿನಲ್ಲಿ ಸ್ತ್ರೀ ಸಂವೇದನೆ ಗಾಢವಾಗಿ ಇರುವುದನ್ನು ನಾವು ಗಮನಿಸಬಹುದಾಗಿದೆ. ಪಿತೃ ಪ್ರಧಾನ ವ್ಯವಸ್ಥೆಯಲ್ಲಿನ ಬಾಲೆಯರ ಗೋಳು, ಬಾಲ್ಯ ವಿವಾಹ, ವಿಧವೆಯರ ಪಾಡು ಇತ್ಯಾದಿಗಳ ಬಗ್ಗೆ ಹೇಳುತ್ತಲೇ ಹೆಣ್ಣು ಮಕ್ಕಳ ಸಶಕ್ತತೆಯ ನಿರ್ಧರಿತ ಧ್ವನಿಯೊಡನೆ ಕಥೆಯನ್ನು ಅಂತ್ಯಗೊಳಿಸುವ ಕಾರಂತರ ದಾಟಿ ಜೀವನ್ಮುಖಿಯಾದದ್ದು ಹಾಗೂ ಪ್ರೇರಣೆ ನೀಡುವಂತಹದ್ದು ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಸತೀಶ್ ಜವರೇಗೌಡ ಮಾತನಾಡಿದರು. ವಿ-ಕೇರ್ ಸಂಸ್ಥೆ ಧರ್ಮದರ್ಶಿ ವಕೀಲೆ ಶೋಭಾಗೌಡ, ವೈದ್ಯರಾದ ಸಾರಿಕಾ ಪ್ರಸಾದ್, ಅಯ್ಯಪ್ಪ ಹೂಗಾರ್, ಮೂಡಿಗೆರೆ ಗೋಪಾಲ್, ಸ್ಟ್ಯಾನ್ಲಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net