

ಬನ್ನೂರು: ಮನುಷ್ಯನಿಗೆ ಎಲ್ಲ ಅಂಗಗಳಿಗಿಂತಲೂ ಕಣ್ಣು ಪ್ರಮುಖವಾದುದು. ಇಂದು ಸಮಾಜದಲ್ಲಿ ಹುಟ್ಟಿನಿಂದಲೇ ತಮ್ಮ ಕಣ್ಣನ್ನು ಕಳೆದುಕೊಂಡು ಎಷ್ಟೋ ಮಂದಿ ಅಂಧಕಾರದಲ್ಲಿ ಮುಳುಗಿದ್ದಾರೆ. ಇಂತಹ ವ್ಯಕ್ತಿಗಳ ಬಾಳಿಗೆ ಬೆಳಕಾಗಲು ಜನರು ಮರಣೋತ್ತರ ತಮ್ಮ ನೇತ್ರಗಳನ್ನು ದಾನ ಮಾಡುವಂತೆ ಸಮಾಜ ಸೇವಕ ಮಹೇಂದ್ರಸಿಂಗ್ ಕಾಳಪ್ಪ ಕೋರಿದರು.
ಪಟ್ಟಣದ ರೋಟರಿ ಸಂಸ್ಥೆಯ ಆವರಣದಲ್ಲಿ ಕಾನ್‌ಸಿಂಗ್‌ಜೀ ರಾಜ್‌ಪುರೋಹಿತ್ ಅವರ 14ನೇ ಪುಣ್ಯಸ್ಮರಣೆಯ ಅಂಗವಾಗಿ ಭಾನುವಾರ ಬನ್ನೂರಿನ ರೋಟರಿ ಸಂಸ್ಥೆ, ಬನ್ನೂರಿನ ಲಯನ್ಸ್ ಗ್ರೀನ್‌ಲ್ಯಾಂಡ್ ಸಹಕಾರದೊಂದಿಗೆ ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆಯ ಶಿಬಿರದಲ್ಲಿ ಮಾತನಾಡಿದರು.
ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯ. ಕೆಲವೊಮ್ಮೆ ವಯಸ್ಸಿಗನುಗುಣವಾಗಿ ದೃಷ್ಟಿ ದೋಷಗಳಾಗಬಹುದು. ಇಂತಹ ವಯಸ್ಸಾದವರನ್ನು ಆಗಿಂದಾಗ್ಗೆ ತಜ್ಞ ನೇತ್ರ ವೈದ್ಯರಿಂದ ನೇತ್ರಗಳನ್ನು ತಪಾಸಣೆ ಮಾಡಿಸುವಂತೆ ಸಲಹೆ ನೀಡಿದರು.
ಶಿಬಿರ ಉದ್ಘಾಟಿಸಿ ಮಾತನಾಡಿದ ಗೌರಿದೇವಿ ಕಾನ್‌ಸಿಂಗ್, ಇಂತಹ ಶಿಬಿರಗಳು ಇನ್ನೂ ಹೆಚ್ಚು ಹೆಚ್ಚು ಹಮ್ಮಿಕೊಂಡು ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಕಲ್ಪಿಸುವಂತೆ ಕೋರಿದರು. ವಿವೇಕಾನಂದ ಶಿಕ್ಷಣ ಸಂಸ್ಥೆಯ ಎಂ.ಪ್ರಕಾಶ್ ಮಾತನಾಡಿದರು.
ರೋಟರಿ ಶಾಲೆಯ ವಿವಿಧ ಕೊಠಡಿಗಳಲ್ಲಿ ವಿವಿಧ ರೀತಿಯ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿತ್ತು. ನೇತ್ರ ತಜ್ಞ ವೈದ್ಯರಿಂದ ಕಣ್ಣಿನಪೊರೆ, ಗ್ಲಾಕೋಮ, ಕಣ್ಣಿನಲ್ಲಿ ನೀರು ಸೋರುವಿಕೆ, ಕಣ್ಣಿನಲ್ಲಿ ಗೀಜು ಬರುವುದು, ಹತ್ತಿರ ಮತ್ತು ದೂರದೃಷ್ಟಿ ದೋಷ, ಕಣ್ಣಿನಲ್ಲಿ ಬಿರುಕು ಉಂಟಾಗುವುದು, ವಾರೆ ಕಣ್ಣು, ರಾತ್ರಿ ಕುರುಡುತನ ಇವೇ ಮೊದಲಾದ ಕಣ್ಣಿನ ವಿವಿಧ ತೊಂದರೆಗಳಿಗೆ ಪರೀಕ್ಷೆಯನ್ನು ಮಾಡಿಸಿ ಸೂಕ್ತವಾದ ಸಲಹೆ, ಔಷಧಗಳನ್ನು ನೀಡಲಾಯಿತು.
ಹೆಚ್ಚು ಕಣ್ಣಿನ ತೊಂದರೆಯುಳ್ಳವರನ್ನು ಕೊಯಮತ್ತೂರಿನ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗೆಂದು ಆಯ್ಕೆ ಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಸದಸ್ಯರು, ಬನ್ನೂರು ಲಯನ್ಸ್ ಗ್ರೀನ್‌ಲ್ಯಾಂಡ್‌ನ ಸದಸ್ಯರು, ಸ್ವಯಂಸೇವಕರು ಉಪಸ್ಥಿತರಿದ್ದರು.