

ಸರಗೂರು: ನೆರೆ ಸಂತ್ರಸ್ತರ ಆಯ್ಕೆಯಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಪಟ್ಟಿಯಿಂದ ಕೈಬಿಟ್ಟು ಅನ್ಯಾಯ ಮಾಡಲಾಗಿದ್ದು, ಅರ್ಹರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಗುರುವಾರ ತಾಲೂಕು ಕಚೇರಿ ಮುಂಭಾಗ ಸಂತ್ರಸ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಬಿಡಗಲಿನಲ್ಲಿರುವ ತಾಲೂಕು ಕಚೇರಿಯಲ್ಲಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕಂದಾಯ ಇಲಾಖೆ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಅನ್ಯಾಯಕ್ಕೊಳಗಾದ ಫಲಾನುಭವಿಗಳಿಗೆ ಸೂಕ್ತ ಪರಿಹಾರ ಸಿಗುವವರೆಗೂ ನಿರಂತರವಾಗಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ಆದಿ ಕರ್ನಾಟಕ ಮಹಾಸಭಾದ ತಾಲೂಕು ಅಧ್ಯಕ್ಷ ಶಿವಣ್ಣ ಮಾತನಾಡಿ, ತನಿಖಾ ತಂಡದ ನಿರ್ಲಕ್ಷಿತ ಮತ್ತು ನಾಮ್‌ಕೇವಾಸ್ತೆ ವರದಿಯನ್ನು ರದ್ದುಗೊಳಿಸಿ, ಆರ್‌ಜಿಸಿಎಚ್‌ಎಲ್ ಆನ್‌ಲೈನ್ ಲಾಗಿನ್‌ನಿಂದ ಕೈಬಿಟ್ಟಿರುವ ಫಲಾನುಭವಿಗಳನ್ನು ಅರ್ಹರೆಂದು ಪರಿಗಣಿಸಿ ಪರಿಹಾರ ನೀಡಬೇಕು. ಹೊಸದಾಗಿ ಸಲ್ಲಿಸಿರುವ ಹಾಗೂ ಬಾಕಿ ಉಳಿದಿರುವ ಅರ್ಜಿಗಳನ್ನು ಪರಿಶೀಲಿಸಿ ಅರ್ಹರನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂವಿಧಾನ ಸಂರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೆಟ್ಟಸ್ವಾಮಿ ಮಾತನಾಡಿ, ಸರಗೂರು ತಾಲೂಕಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳ ಕುರಿತು ಗ್ರಾಮಲೆಕ್ಕಿಗರು, ರಾಜಸ್ವ ನೀರಿಕ್ಷಕರು, ಇಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಸೂಕ್ತ ರೀತಿಯಲ್ಲಿ ಮಾಹಿತಿ ನೀಡಿದ್ದರೂ ತನಿಖಾ ತಂಡ ಮಾಹಿತಿ ಸುಳ್ಳು ಎಂದು ಅರ್ಹ ಪಲಾನುಭವಿಗಳಿಗೆ ಅನ್ಯಾಯ ಎಸಗಿದೆ. ತಾಲೂಕಿನಲ್ಲಿ ತುಂಬ ಕಡುಬಡವರಿದ್ದು, ವಾಸಿಸಲು ಮನೆ ಇಲ್ಲದೆ ಪರದಾಡುತ್ತಿದ್ದಾರೆ ಎಂದು ದೂರಿದರು.
ತಹಸೀಲ್ದಾರ್ ಚಲುವರಾಜು ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ನಂತರ ಮಾತನಾಡಿದ ತಹಸೀಲ್ದಾರ್, ಸರ್ಕಾರದ ಆದೇಶದ ಮೇರೆಗೆ 600 ಅರ್ಜಿಗಳು ವಜಾಗೊಂಡಿವೆ. ಮೇಲಧಿಕಾರಿಗಳು ತನಿಖೆ ಮಾಡಿದ್ದಾರೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ. ಮನವಿ ಸಲ್ಲಿಸಿದರೆ ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.